ಬೆಂಗಳೂರು: ಯಾರಿಗೂ ಗುರುತು ಸಿಗದ ಹಾಗೆ ಹಾಡಹಗಲೇ ಬಿಯಾಂಡ್ ಸರ್ಕಲ್ ಬಳಿ ಅಪಘಾತ ಮಾಡಿ ಕ್ಯಾಂಟರ್ ಚಾಲಕ ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿದ್ದ.
ಆದರೆ, ಘಟನೆಯಿಂದ ಮೃತಪಟ್ಟಿದ್ದ ಅಪರಿಚಿತ ವ್ಯಕ್ತಿ ಯಾರು?, ಕ್ಯಾಂಟರ್ ಚಾಲಕ ಯಾರು? ಎಂಬುದರ ಬಗ್ಗೆ ಘಟನೆ ನಡೆದಾಗ ಗೊಂದಲ ಉಂಟಾಗಿತ್ತು. ಆದರೆ, ಬಿಯಾಂಡ್ ಸರ್ಕಲ್ ಬಳಿ ಸೆರೆಯಾದ ಸಿಸಿಟಿವಿ ದೃಶ್ಯ ಆರೋಪಿಯ ಗುರುತು ಮತ್ತು ಮೃತದೇಹ ಚಹರೆ ಪತ್ತೆ ಹಚ್ಚಲು ಸಹಕಾರಿಯಾಗಿದೆ.
ಮೃತ ವ್ಯಕ್ತಿ ಕೆಆರ್ ಪುರದ ನಿವಾಸಿ ರಾಮು ಎಂಬಾತ ಮತ್ತು ಅಪಘಾತ ಮಾಡಿದ ಆರೋಪಿ ಸುರೇಶ್ ಕುಮಾರ್ ಎಂಬುವ ವ್ಯಕ್ತಿ ಅನ್ನೋದನ್ನ ಚಿಕ್ಕಪೇಟೆ ಸಂಚಾರಿ ಪೊಲೀಸರು ತನಿಖೆ ನಡೆಸಿ ಪತ್ತೆ ಮಾಡಿದ್ದಾರೆ. ನ.3ರಂದು ಚಿಕ್ಕಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಿಯಾಂಡ್ ಸರ್ಕಲ್ ಬಳಿ ರಾಮು ನಡೆದುಕೊಂಡು ಹೋಗುತ್ತಿದ್ದ ವೇಳೆ ಏಕಾಏಕಿ ಬಂದ ಕ್ಯಾಂಟರ್ ಹಿಂಬದಿಯಿಂದ ಡಿಕ್ಕಿ ಹೊಡೆದಿತ್ತು. ಪರಿಣಾಮ ರಾಮು ರುಂಡವೇ ಬೇರ್ಪಟ್ಟು ದೇಹ ನಜ್ಜುಗುಜ್ಜಾಗಿತ್ತು.
ನಂತರ ಇನ್ಸ್ಪೆಕ್ಟರ್ ಕಲ್ಲೇಶಪ್ಪ ತನಿಖೆಗಿಳಿದು ಸುತ್ತ ಮುತ್ತಲಿನ ಸಿಸಿಟಿವಿ ಪರಿಶೀಲನೆ ಮಾಡಿದಾಗ ಒಂದು ಸಿಸಿಬಿಟಿಯಲ್ಲಿ ರಾಮು ವೈನ್ಸ್ ಶಾಪ್ವೊಂದರ ಬಳಿ ನೀರು ಕುಡಿದು ಹೋಗುತ್ತಿದ್ದ ದೃಶ್ಯ ಸೆರೆಯಾಗಿತ್ತು. ಈ ದೃಶ್ಯದ ಆಧಾರದ ಮೇರೆಗೆ ಸ್ಥಳೀಯರಲ್ಲಿ ವಿಚಾರಿಸಿದಾಗ ಅಲ್ಲಿ ಗುಜರಿ ವ್ಯಾಪಾರ ಮಾಡುತ್ತಿದ್ದವನ ವ್ಯಕ್ತಿಯ ಚಹರೆ ಗುರುತಿಸಿದ್ದ.
ನಂತರ ಪೊಲೀಸರು ಮೃತ ಪಟ್ಟ ರಾಮು ಕುಟುಂಬಸ್ಥರನ್ನ ಪತ್ತೆ ಮಾಡಿ ಮೃತದೇಹವನ್ನ ಹಸ್ತಾಂತರಿಸಿದ್ದಾರೆ. ಹಾಗೆ ಅಜಾಗರೂಕತೆಯಿಂದ ಚಾಲನೆ ಮಾಡಿ, ಓರ್ವನ ಸಾವಿಗೆ ಕಾರಣವಾದ ಕ್ಯಾಂಟರ್ ಚಾಲಕನನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.