ಬೆಂಗಳೂರು : ದೇಶಾದ್ಯಂತ ನೂರಾರು ಶಾಖೆ ಹೊಂದಿರುವ ಹಾಗೂ ಸ್ಟಾಕ್ ಎಕ್ಸ್‌ಚೇಂಜ್ ಹೆಸರಲ್ಲಿ ಜನರಿಂದ ಹೂಡಿಕೆ ಮಾಡಿಸಿಕೊಂಡು ನೂರಾರು ಕೋಟಿ ವಂಚನೆ ಸಂಬಂಧ ತೆಲಂಗಾಣ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಕಾರ್ವಿ ಟ್ರೇಡಿಂಗ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಮೂವರು ಆರೋಪಿಗಳನ್ನು ಬಾಡಿ ವಾರೆಂಟ್ ಮೇಲೆ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಕಾರ್ವಿ ಸ್ಟಾಕ್ ಟ್ರೇಡಿಂಗ್ ಕಂಪನಿಯ ಎಂಡಿ ಪಾರ್ಥ ಸಾರಥಿ, ಸಿಇಒ ಕೃಷ್ಣಹರಿ ಸೇರಿ ಮೂವರನ್ನು ಹೈದರಾಬಾದ್ ಜೈಲಿನಲ್ಲಿದ್ದವರನ್ನು ಬಾಡಿ ವಾರೆಂಟ್ ಮೇಲೆ ಸಿಸಿಬಿ ಪೊಲೀಸರು 13 ದಿನಗಳ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ನಾಳೆಗೆ ಪೊಲೀಸ್ ಕಸ್ಟಡಿ ಅವಧಿ ಮುಗಿಯಲಿದೆ.
ಸಾರ್ವಜನಿಕರ ಶೇರುಗಳನ್ನ ಗಮನಕ್ಕೆ ತರದೇ ಬ್ಯಾಂಕ್‌ನಲ್ಲಿ ಅಡಮಾನ ಇಟ್ಟು ಲೋನ್ ಪಡೆದು ವಂಚಿಸಿರುವ ಆರೋಪ ಕಾರ್ವಿ ಟ್ರೇಡಿಂಗ್ ಕಂಪನಿ ವಿರುದ್ಧ ಕೇಳಿ ಬಂದಿತ್ತು. ಕಾರ್ವಿ ಸ್ಟಾಕ್ ಟ್ರೇಡಿಂಗ್ ಕಂಪನಿಯ ಮುಖ್ಯ ಕಚೇರಿ ಹೈದರಾಬಾದ್‌ನಲ್ಲಿದ್ದರೆ, ಬೆಂಗಳೂರಲ್ಲೂ 10ಕ್ಕೂ ಹೆಚ್ಚು ಬ್ರಾಂಚ್ ಆಫೀಸ್‌ಗಳನ್ನ ಹೊಂದಿದೆ. ದೇಶವ್ಯಾಪಿ 250ಕ್ಕೂ ಹೆಚ್ಚು ಶಾಖೆಗಳನ್ನ ಕಾರ್ವಿ ಸ್ಟಾಕ್ ಟ್ರೇಡಿಂಗ್ ಕಂಪನಿ ಹೊಂದಿದೆ.
ನಗರದಲ್ಲಿ ಸುಮಾರು 200 ಕೋಟಿಗೂ ಅಧಿಕ ಹಣವನ್ನ ಕಾರ್ವಿ ಟ್ರೇಡಿಂಗ್ ಕಂಪನಿ ವಂಚಿಸಿರುವ ಆರೋಪ ಕೇಳಿ ಬಂದಿತ್ತು. ಬಳ್ಳಾರಿ ಮೂಲದ ಉದ್ಯಮಿಗೆ ವಂಚನೆ ಮಾಡಿರುವ ಸಂಬಂಧ ಶೇಷಾದ್ರಿಪುರಂ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬೆಂಗಳೂರು ಕಾರ್ವಿ ಟ್ರೇಡಿಂಗ್ ಕಂಪನಿಯ ಮ್ಯಾನೇಜರ್ ವಿಜಯೇಂದ್ರ ಎಂಬಾತನನ್ನು ಬಂಧಿಸಿದ್ದರು.
ಆರೋಪಿ ವಿಜಯೇಂದ್ರ ನೀಡಿದ ಮಾಹಿತಿ ಆಧರಿಸಿ ಮೂವರನ್ನು ವಿಚಾರಣೆ ನಡೆಸಿರುವ ಸಿಸಿಬಿಯ ಸಂಘಟಿತ ಅಪರಾಧ ವಿಭಾಗ ಡಿಸಿಪಿ ಧರ್ಮೇಂದ್ರ, 250 ಕೋಟಿಗಿಂತ ಹೆಚ್ಚು ಹಣ ವಂಚನೆ ಮಾಡಿರುವುದು ಮೇಲ್ನೊಟಕ್ಕೆ ಸಾಬೀತಾಗಿದೆ.
ಈ ಬಗ್ಗೆ ದೃಢೀಕರಿಸಿಕೊಳ್ಳಲು ನ್ಯಾಷನಲ್ ಸ್ಟಾರ್ಕ್ ಏಜೆನ್ಸಿಗೆ ಪತ್ರ ಬರೆಯಲಾಗಿದೆ. ಅಲ್ಲಿಂದ ಮಾಹಿತಿ ಬಂದ ಬಳಿಕವಷ್ಟೇ ಇದುವರೆಗೂ ಆರೋಪಿಗಳು ಎಷ್ಟು ಹಣ ಮೋಸ ಮಾಡಿದ್ದಾರೆ ಎಂಬುವುದರ ಬಗ್ಗೆ ತಿಳಿಯಲಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಕಾರ್ವಿ ಸ್ಟಾಕ್ ಟ್ರೇಡಿಂಗ್ ಕಂಪನಿ ವಿರುದ್ಧ ಈ ಹಿಂದೆ ಹೈದರಾಬಾದ್‌ನಲ್ಲಿ 563 ಕೋಟಿ ವಂಚನೆ ಸಂಬಂಧ ದೂರು ದಾಖಲಾಗಿತ್ತು. ಕಂಪನಿಯ ಮುಖ್ಯಸ್ಥ ಪಾರ್ಥಸಾರಥಿಯನ್ನ ಹೈದರಾಬಾದ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಶೇರು ಮಾರ್ಕೆಟ್ ಮೂಲಕ ಜನರಿಂದ ಟ್ರೇಡಿಂಗ್ ಹೆಸರಲ್ಲಿ ಕಾರ್ವಿ ಸ್ಟಾಕ್ ಎಕ್ಸ್‌ಚೇಂಜ್ ಕಂಪನಿ ಹಣ ಪಡೆಯುತ್ತಿತ್ತು. ಬೇರೊಬ್ಬರ ಹೆಸರಲ್ಲಿನ ಶೇರುಗಳನ್ನ ಬ್ಯಾಂಕ್‌ನಲ್ಲಿ ಅಡಮಾನವಿರಿಸಿ ಸಾಲವನ್ನ ಕಾರ್ವಿ ಸ್ಟಾಕ್ ಟ್ರೇಡಿಂಗ್ ಕಂಪನಿ ಪಡೆದಿದೆ. ಇದೇ ರೀತಿ ಸಾವಿರಾರು ಜನ ಸೇರಿ ಹಲವಾರು ಉದ್ಯಮಿಗಳಿಗೆ ವಂಚಿಸಿರೋ ಆರೋಪ ಕಾರ್ವಿ ಸ್ಟಾಕ್ ಟ್ರೇಡಿಂಗ್ ಕಂಪನಿ ಮೇಲಿದೆ.
ಪವರ್ ಆಫ್ ಅಟಾರ್ನಿ ಮೂಲಕ ಷೇರುಗಳು ಹಾಗೂ ಕಂಪನಿ ಸೆಕ್ಯೂರಿಟಿ ಬಾಂಡ್‌ಗಳನ್ನ ಬ್ಯಾಂಕ್‌ನಲ್ಲಿ ಅಡಮಾನ ಇಟ್ಟಿದ್ದು, ವಿಚಾರಣೆ ವೇಳೆ ಹೊರ ಬಂದಿತ್ತು. ಬ್ಯಾಂಕ್‌ನಿಂದ ಹಣ ಪಡೆದ ನಂತರ ಲೋನ್ ತೀರಿಸದೇ ಕಾರ್ವಿ ಕಂಪನಿ ಡಿಫಾರ್ಟರ್ ಆಗಿತ್ತು.
ಹೈದರಾಬಾದ್‌ನ ICICI ಬ್ಯಾಂಕ್‌ಗೆ 563 ಕೋಟಿ ಇಂಡಸ್ ಲ್ಯಾಂಡ್ ಬ್ಯಾಂಕ್‌ಗೆ 137 ಕೋಟಿ ಸೇರಿ 2 ಸಾವಿರ ಕೋಟಿಗೂ ಅಧಿಕ ವಂಚನೆ ಆರೋಪ ಕಾರ್ವಿ ಸ್ಟಾಕ್ ಟ್ರೇಡಿಂಗ್ ಕಂಪನಿ ವಿರುದ್ಧ ಕೇಳಿ ಬಂದಿತ್ತು.