ಬೆಂಗಳೂರು : ಸೋಮವಾರ ಬೆಳ್ಳಂಬೆಳಗ್ಗೆ 43 ವಿದೇಶಿ ಪ್ರಜೆಗಳ ಮನೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ದಾಖಲೆ ಪರಿಶೀಲಿಸಿದ್ದಾರೆ. ಆ ವೇಳೆ ಸೂಕ್ತ ದಾಖಲೆ ಹೊಂದಿರದ 27 ವಿದೇಶಿಗರು ಸಿಕ್ಕಿಬಿದ್ದಿದ್ದು, ಅವರನ್ನು ಅಕ್ರಮ ವಲಸಿಗರನ್ನು ಕಾಯ್ದಿರಿಸುವ ಸ್ಥಳಕ್ಕೆ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಪರಾಧ ಪತ್ತೆ ದಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಡ್ರಗ್ಸ್ ಕಳ್ಳಸಾಗಾಣಿಕೆ ಹಾಗೂ ಮಾರಾಟ ತಡೆಗಟ್ಟುವ ಸಂಬಂಧ ವಿದೇಶಿ ಪ್ರಜೆಗಳ ಮೇಲೆ ಸಿಸಿಬಿ ಪೊಲೀಸರು ಕಣ್ಣಿಟ್ಟಿದ್ದರು. ಸೋಮವಾರ ಬೆಳಗ್ಗೆ 6 ಗಂಟೆಗೆ 100ಕ್ಕೂ ಅಧಿಕ ಸಿಸಿಬಿ ಪೊಲೀಸರು ಶ್ವಾನದಳದೊಂದಿಗೆ 43 ವಿದೇಶಿ ಪ್ರಜೆಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.
ಬೆಂಗಳೂರಿನ ಕೆಆರ್‌ಪುರ, ಹೆಣ್ಣೂರು, ಬಾಣಸವಾಡಿ, ಕೊತ್ತನೂರು, ಸಂಪಿಗೆಹಳ್ಳಿ, ಬಾಗಲೂರು, ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ 78 ವಿದೇಶಿಗರ ವೀಸಾ, ಪಾಸ್‌ಪೋರ್ಟ್ ಸೇರಿ ಇನ್ನಿತರ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ ಎಂದು ಹೇಳಿದೆ.
ಈ ಪೈಕಿ 17 ಪುರುಷರು ಹಾಗೂ 11 ಮಹಿಳೆಯರು ಸೇರಿ ಒಟ್ಟು 27 ಮಂದಿಯ ಪಾಸ್‌ಪೋರ್ಟ್ ಹಾಗೂ ವೀಸಾದಲ್ಲಿ ಲೋಪಗಳು ಕಂಡು ಬಂದಿವೆ. 27 ಮಂದಿಯನ್ನು ಅಕ್ರಮ ವಲಸಿಗರ ಕಾಯ್ದಿರಿಸುವ ಸ್ಥಳಕ್ಕೆ ಕಳುಹಿಸಲು ಕ್ರಮಕೈಗೊಳ್ಳುವ ಉದ್ದೇಶದಿಂದ ಎಫ್‌ಆರ್‌ಆರ್‌ಒ ಕಚೇರಿ ಮುಂದೆ ಹಾಜರುಪಡಿಸಲಾಗಿದೆ ಎಂದಿದೆ.
ಓರ್ವ ವಿದೇಶಿ ಪ್ರಜೆಯ ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪಾಸ್‌ಪೋರ್ಟ್ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿರುವುದು ಕಂಡು ಬಂದಿದೆ. ಡ್ರಗ್ಸ್ ಪೂರೈಕೆಯಲ್ಲಿ ವಿದೇಶಿಗರು ಶಾಮೀಲಾಗುತ್ತಿರುವ ಪ್ರಕರಣ ಹೆಚ್ಚುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಕ್ರಮವಾಗಿ ನೆಲೆಸಿರುವವರನ್ನು ಪತ್ತೆ ಹಚ್ಚುವ ಸಲುವಾಗಿ ದಾಳಿ ನಡೆಸಲಾಗಿದೆ ಎಂದು ಸಿಸಿಬಿ ಹೇಳಿದೆ.
ಓದಿ: ಕೇಂದ್ರಕ್ಕೆ ಪ್ರಸ್ತಾಪಿಸಬೇಕಾದ ವಿಷಯಗಳ ಬಗ್ಗೆ ಸಂಸದರೊಂದಿಗೆ ಚರ್ಚಿಸಿದ್ದೇನೆ : ದೆಹಲಿಯಲ್ಲಿ ಸಿಎಂ ಹೇಳಿಕೆ