ಬೆಂಗಳೂರು: ಕೆಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಯ್ತು. ಇದೀಗ ಸಿಸಿಬಿ ಕಣ್ಣು ಟರ್ಫ್ ಕ್ಲಬ್ ಮೇಲೆ ನೆಟ್ಟಿದೆ. ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ವಂಚನೆ ಮಾಹಿತಿ ಹಿನ್ನೆಲೆಯಲ್ಲಿ ಟರ್ಫ್ ಕ್ಲಬ್ ಮೇಲೆ ಸಿಸಿಬಿ ತಂಡ ದಾಳಿ ನಡೆಸಿ, 39 ಜನರನ್ನು ಬಂಧಿಸಿ 96 ಲಕ್ಷ ರೂಪಾಯಿ ಜಪ್ತಿ ಮಾಡಿದೆ.
ಪ್ರಕರಣ ಗಂಭೀರತೆ ಅರಿತ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತುರ್ತು ಸುದ್ದಿಗೋಷ್ಟಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದರು. ಕ್ರಿಕೆಟ್ ಬೆಟ್ಟಿಂಗ್ ನಂತೆ ಕುದುರೆ ರೇಸ್ ನಲ್ಲಿ ಬೆಟ್ಟಿಂಗ್ ದಂಧೆ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಟರ್ಫ್ ಕ್ಲಬ್ ಮೇಲೆ ದಾಳಿ ನಡೆಸಿ 39 ಜನರನ್ನು ಬಂಧಿಸಲಾಗಿದೆ. ಅವರಿಂದ 96 ಲಕ್ಷ ರೂ. ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಕ್ಲಬ್ ನಲ್ಲಿ ಖಾಸಗಿ ವ್ಯಕ್ತಿಗಳ ಒಡೆತನದ 20 ಸ್ಟ್ಯಾಂಡ್ ಗಳಲ್ಲಿ ಆರೋಪಿಗಳು ಕುದುರೆ ರೇಸ್ ನಲ್ಲಿ ಒಂದಕ್ಕೆ ಹತ್ತರಷ್ಟು ಕೊಡುವುದಾಗಿ ಹೇಳಿ ಬಾಜಿ ಕಟ್ಟಿಸಿಕೊಳ್ಳುತ್ತಿದ್ದರು. ಬಂದ ಆದಾಯದ ಹಣದಲ್ಲಿ ಸರ್ಕಾರಕ್ಕೆ ಶೇ.28ರಷ್ಟು ತೆರಿಗೆ ಕಟ್ಟದೆಯೂ ಲಕ್ಷಾಂತರ ರೂಪಾಯಿ ನಷ್ಟ ಉಂಟು ಮಾಡಿದ್ದರು. ಅಸಲು ಬಿಲ್ಲು ತೋರಿಸದೆ ಮೋಸದ ಹಣ ಅವರ ಬಳಿ ದಂಧೆಕೋರರ ಬಳಿಯೇ ಇಟ್ಟುಕೊಳ್ಳುತ್ತಿದ್ದರು. ಅಕ್ರಮವಾಗಿ ಸಂಪಾದಿಸಿದ ಹಣ ಯಾರಿಗೆ ಸೇರುತಿತ್ತು ಎಂಬುದರ ಬಗ್ಗೆ ತನಿಖೆ ನಡೆಸಲಾಗಿದೆ ಎಂದರು.
ದಾಳಿ ಸಂಬಂಧ ಸೆಕ್ಷನ್ 420 ಅಡಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಲಿ ದೂರು ದಾಖಲಾಗಿದೆ. ದಾಖಲೆಗಳನ್ನು ತಿದ್ದಿ ಮೋಸ ಮಾಡಿರುವುದು ಕಂಡುಬಂದಿದೆ. ಟರ್ಫ್ ಕ್ಲಬ್ಗೆ ನಾನು ಸೇರಿದಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಣಕಾಸು ಕಾರ್ಯದರ್ಶಿ ಮತ್ತು ಟರ್ಫ್ ಕ್ಲಬ್ ಸದಸ್ಯರಾಗಿದ್ದೇವೆ. ಆದರೂ ನಾವು ಅಕ್ರಮದ ಬಗ್ಗೆ ದಾಳಿ ನಡೆಸಿದ್ದೇವೆ. ಸರ್ಕಾರಕ್ಕೆ ಎಷ್ಟು ಕೋಟಿ ವಂಚನೆಯಾಗಿದೆ. ದಾಖಲೆಗಳ ಬಗ್ಗೆ ಪರಿಶೀಲನೆ ಮಾಡ್ತಿದ್ದೇವೆ. ಈ ಅಕ್ರಮದ ಬಗ್ಗೆ ಜಿಎಸ್ಟಿ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ. ಬೆಟ್ಟಿಂಗ್ನಲ್ಲಿ ಕುದುರೆಗಳ ಮಾಲೀಕರು, ಜಾಕಿಗಳು, ಬುಕ್ಕಿಗಳು, ಅಧಿಕಾರಿವರ್ಗ, ಸಿಬ್ಬಂದಿ ಎಲ್ಲರ ಪಾತ್ರವಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಲಿದೆ ಎಂದು ಭಾಸ್ಕರ್ ರಾವ್ ಮಾಹಿತಿ ನೀಡಿದರು.
ಕಳೆದ ಕೆಲ ದಿನಗಳ ಹಿಂದೆ ವಿಲ್ ಟೂ ವಿನ್ ಕುದುರೆ ರೇಸ್ ನಲ್ಲಿ ಬಿದ್ದು ಕಾಲು ಮುರಿದುಕೊಂಡು ಸಾವನ್ನಪ್ಪಿತ್ತು. ಇದೇ ಫಂಟರ್ಸ್ ರೊಚ್ಚಿಗೆದ್ದು ಟರ್ಪ್ ಕ್ಲಬ್ ಒಳಗಿನ ಕೌಂಟರ್ ಗಳು, ಟಿವಿ ಸೇರಿದಂತೆ ಪಿಠೋಪಕರಣಗಳನ್ನು ಧ್ವಂಸಗೊಳಿಸಿ ಪುಂಡಾಟ ಮೆರೆದಿದ್ದರು. ಈ ಪ್ರಕರಣ ಸಂಬಂಧ ಹೈಗ್ರೌಂಡ್ಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಪ್ರಕರಣದ ಗಂಭೀರತೆ ಅರಿತ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಸಿಸಿಬಿಗೆ ಕೇಸ್ ವರ್ಗಾವಣೆ ಮಾಡಿದ್ದರು. ಪ್ರಕರಣ ಕೈಗೆತ್ತಿಕೊಂಡ ಸಿಸಿಬಿ ತನಿಖೆಯಲ್ಲಿ ಟರ್ಫ್ ಕ್ಲಬ್ ಸಿಬ್ಬಂದಿಯ ಕಳ್ಳಾಟ ಇಂದು ಬಯಲಾಗಿದೆ.