ಬೆಂಗಳೂರು: ಈ ಹಿಂದಿನ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆಪ್ತ ಎಂದು ಹೇಳಿಕೊಂಡು ಉದ್ಯಮಿಗೆ ವಂಚಿಸಲು ಮುಂದಾಗಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯದ ಮಳವಳ್ಳಿ ಮೂಲದ ಶ್ರೀನಿವಾಸ್ ಆಲಿಯಾಸ್ ಕಿರಣ್ ಬಂಧಿತ ಆರೋಪಿ. ಉದ್ಯಮಿ ಮನೋಹರ್ ಎಂಬುವರು ಅದ್ವಿಕ್ ಪವರ್ ಟೆಕ್ ಕಂಪನಿ ನಡೆಸುತ್ತಿದ್ದು, ಸಾಲಕ್ಕಾಗಿ ಓಡಾಡುತ್ತಿದ್ದರು. ಈ ವೇಳೆ ಸ್ನೇಹಿತರ ಮೂಲಕ ಮನೋಹರ್‌ಗೆ ಶ್ರೀನಿವಾಸ್ ಪರಿಚಯವಾಗಿದೆ.
ನಾನು ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರ ಸೆಕ್ರೆಟರಿ. ನಿಮಗೆ ನಾನು ಸಹಾಯ ಮಾಡ್ತೀನಿ ಎಂದು ಭರವಸೆ ನೀಡಿದ್ದನಂತೆ. ಕೆಲ ದಿನಗಳ ಬಳಿಕ ಕಂಪನಿಯ ವ್ಯವಹಾರ ತಿಳಿದುಕೊಂಡ ಆರೋಪಿ ಬೆದರಿಕೆ ತಂತ್ರ ಅನುಸರಿಸಿದ್ದಾನೆ.
ನಿಮಗೆ ಸಾಲ ಕೊಟ್ಟವರು ಕಮೀಷನರ್ ಕಚೇರಿಗೆ ಬಂದು ದೂರು ನೀಡಿದ್ದಾರೆ. ಈ ಪ್ರಕರಣ ಮುಚ್ಚಿ ಹಾಕಲು ನೀವು 2 ಲಕ್ಷ ರೂ ಹಣ ಕೊಡಬೇಕು ಎಂದು ದುಂಬಾಲು ಬಿದ್ದಿದ್ದಾನೆ. ಇದರಿಂದ ಅನುಮಾನಗೊಂಡ ಮನೋಹರ್ ಕಮೀಷನರ್ ಕಚೇರಿಯಲ್ಲಿ ವಿಚಾರಿಸಿದ್ದಾರೆ. ಈ ವೇಳೆ, ತನ್ನ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ ಅನ್ನೋದು ಗೊತ್ತಾಗಿದೆ. ತಕ್ಷಣ ಅವರು ಸದಾಶಿವ ನಗರ ಪೊಲೀಸ್ ಠಾಣೆಗೆ ತೆರಳಿ ಆರೋಪಿ ವಿರುದ್ಧ ದೂರು ನೀಡಿದ್ದಾರೆ.
ಈ ಪ್ರಕರಣವನ್ನು ಬಳಿಕ ಸಿಸಿಬಿಗೆ ಹಸ್ತಾಂತರಿಸಲಾಗಿತ್ತು. ಇದೀಗ ಆರೋಪಿ ಶ್ರೀನಿವಾಸ್‌ನ ಬಂಧನವಾಗಿದೆ.