ಬೆಂಗಳೂರು: ಖಾಸಗಿ ಕಾಲೇಜಿನಲ್ಲಿ ಮಗನಿಗೆ ಎಂಬಿಬಿಎಸ್ ಸೀಟು ಕೊಡಿಸುವುದಾಗಿ ಹೇಳಿ ವೈದ್ಯನನ್ನು ನಂಬಿಸಿ 1.16 ಕೋಟಿ ರೂ ಪಡೆದು ವಂಚಿಸಿದ್ದ ಐವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 24 ಲಕ್ಷ ರೂ. ನಗದು, 25 ಗ್ರಾಂ ಚಿನ್ನಾಭರಣ ಹಾಗೂ ನಕಲಿ ವಾಕಿಟಾಕಿಗಳನ್ನು ಜಪ್ತಿ ಮಾಡಲಾಗಿದೆ.
ಕಲಬುರಗಿಯ ಆಳಂದ ಮೂಲದ ವೈದ್ಯ ಶಂಕರ್ ಬಾಬುರಾವ್ ನೀಡಿದ ದೂರಿನ ಮೇರೆಗೆ ವಂಚಕರಾದ ನಾಗರಾಜ್, ಮಲ್ಲಿಕಾರ್ಜುನ್, ಮಧು, ಬಸವರಾಜ್ ಹಾಗೂ ಹಮೀದ್ ಎಂಬುವವರು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಪ್ರಕರಣದ ವಿವರ: ಕಲಬುರಗಿಯಲ್ಲಿ ಕ್ಲಿನಿಕ್ ಇಟ್ಟುಕೊಂಡಿರುವ ಶಂಕರ್ ತಮ್ಮ ಮಗನಿಗೆ ಬೆಂಗಳೂರಿನ ಕಾಲೇಜೊಂದರಲ್ಲಿ ಎಂಬಿಬಿಎಸ್ ಸೀಟು ಕೊಡಿಸಲು ಪ್ರಯತ್ನಿಸುತ್ತಿದ್ದರು. ಹಲವು ಸಲ ಬೆಂಗಳೂರಿಗೆ ತಿರುಗಾಡಿದರೂ ಸೀಟು ಸಿಕ್ಕಿರಲಿಲ್ಲ. ಈ ಸಂದರ್ಭದಲ್ಲಿ ಎಂಟು ವರ್ಷಗಳಿಂದ ಪರಿಚಿತನಾಗಿದ್ದ ನಾಗರಾಜ್ ತನಗೆ ಮೆಡಿಕಲ್ ಕಾಲೇಜೊಂದರಲ್ಲಿ ಪರಿಚಯಸ್ಥರಿದ್ದಾರೆ, ಅಲ್ಲಿ ಮಗನಿಗೆ ಸೀಟು ಕೊಡಿಸುತ್ತೇನೆ ಎಂದು ಭರವಸೆ ಕೊಟ್ಟಿದ್ದಾನೆ.
ಹೇಗೂ ಪರಿಚಯಸ್ಥನಾಗಿದ್ದರಿಂದ ಶಂಕರ್ ಇದನ್ನು ನಂಬಿ ಕಳೆದ ವರ್ಷ ಹಂತ ಹಂತವಾಗಿ 1.16 ಕೋಟಿ ಹಣ ಕೊಟ್ಟಿದ್ದಾರೆ. ಬಳಿಕ ಎಂಬಿಬಿಎಸ್ ಸೀಟು ಕೊಡಿಸದೆ ಹಾಗೂ ಹಣವನ್ನೂ ನೀಡದೆ ನಾಗರಾಜ್ ಆಟ ಆಡಿಸಿದ್ದಾನೆ. ಕೆಲ ತಿಂಗಳ ಬಳಿಕ ಶಂಕರ್ ಅವರ ಒತ್ತಡ ತಾಳಲಾರದೆ, ಹಣ ನೀಡುವುದಾಗಿ ಬೆಂಗಳೂರಿಗೆ ಕರೆಯಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಹನಿಟ್ರ್ಯಾಪ್ ಯತ್ನ, ನಕಲಿ ದಾಳಿ: ಶಂಕರ್ ಅವರನ್ನು ಬೆಂಗಳೂರಿಗೆ ಕರೆದಿದ್ದ ಖದೀಮ ನಾಗರಾಜ್ ನಂತರ ಸಿನಿಮೀಯ ಕುತಂತ್ರ ಮಾಡಿದ್ದಾನೆ. ಗಾಂಧಿನಗರದ ಲಾಡ್ಜ್ನಲ್ಲಿ ಶಂಕರ್ ರೂಮ್ ಬುಕ್ ಮಾಡಿ, ನಂತರ ಮಹಾರಾಷ್ಟ್ರ ಮೂಲದ ಲೈಂಗಿಕ ಕಾರ್ಯಕರ್ತೆಯರನ್ನು ರೂಮ್ಗೆ ಕಳುಹಿಸಿ, ಅವರು ಫೋಟೊ ಕ್ಲಿಕ್ಕಿಸಿಕೊಳ್ಳುವಂತೆ ಮಾಡಿ ಹನಿಟ್ರ್ಯಾಪ್ ಯತ್ನ ಮಾಡಿದ್ದಾನೆ.
ಅಷ್ಟೇ ಅಲ್ಲ, ಮಧ್ಯರಾತ್ರಿ ಪೊಲೀಸರ ವೇಷದಲ್ಲಿ ಕೆಲವರು ಎಂಟ್ರಿ ಕೊಟ್ಟಿದ್ದಾರೆ. ವೇಶ್ಯಾವಾಟಿಕೆ ಜಾಲ ನಡೆಸುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ದಾಳಿ ಮಾಡಲಾಗಿದೆ ಎಂದು ಶಂಕರ್‌ಗೆ ಬೆದರಿಸಿದ್ದಾರೆ. ಬಳಿಕ ಶಂಕರ್ ಬಳಿಯಿದ್ದ ಚಿನ್ನಾಭರಣ ಹಾಗೂ ನಗದು ದೋಚಿದ್ದಾರೆ. ಈ ಸಂಬಂಧ ಪೊಲೀಸ್ ಪ್ರಕರಣ ದಾಖಲಾಗದಿರಲು 50 ಲಕ್ಷ ರೂ. ನೀಡುವಂತೆ ಆರೋಪಿಗಳು ಶಂಕರ್ ಅವರಿಗೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದೆ ಹೋದರೆ ನಿನ್ನನ್ನು ಬಂಧಿಸುತ್ತಾರೆ, ಆಗ ನಿನ್ನ ಮಾನ-ಮರ್ಯಾದೆ ಹೋಗಲಿದೆ ಎಂದು ನಾಗರಾಜ್ ಬೆದರಿಸಿದ್ದಾನೆ. ಇದಕ್ಕೆ ಅಂಜಿದ ಶಂಕರ್ ಊರಿಗೆ ಹೋಗಿ ಹಣ ನೀಡುವುದಾಗಿ ಒಪ್ಪಿಕೊಂಡು, ಕಲಬುರಗಿಗೆ ಬಂದು ಖಾಸಗಿ ಬ್ಯಾಂಕ್ನಲ್ಲಿ 50 ಲಕ್ಷ ರೂ. ಸಾಲ ಪಡೆದು ಆರೋಪಿಗಳ ಕೈಗೆ ತಂದಿಟ್ಟಿದ್ದರು ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ನಕಲಿ ಜಾಮೀನಿಗೂ 20 ಲಕ್ಷಕ್ಕೆ ಬೇಡಿಕೆ: ಶಂಕರ್ ಅವರಿಂದ 50 ಲಕ್ಷ ರೂ ಪಡೆದ ಆರೋಪಿಗಳು ಕೆಲ ದಿನಗಳ ಕಾಲ ಸುಮ್ಮನಿದ್ದು, ಬಳಿಕ ಮತ್ತೆ ಹಳೆಯ ಚಾಳಿ ಮುಂದುವರೆಸಿದ್ದಾರೆ. ಅಲ್ಲದೇ, ದಾಳಿ ವೇಳೆ ಬಂಧಿತರಾಗಿರುವ ಯುವತಿಯರಿಗೆ ಜಾಮೀನು ಮಾಡಿಸಲು 20 ಲಕ್ಷ ರೂ. ಹಣ ಕೊಡುವಂತೆ ಶಂಕರ್ ಅವರಿಗೆ ಮತ್ತೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದಿದ್ದರೆ ಯುವತಿಯರಸಮೇತ ನಿನ್ನ ಮನೆಗೆ ಬಂದು ಮಾನ ಮರ್ಯಾದೆ ಹರಾಜು ಹಾಕುವೆ ಎಂದು ವಂಚಕರು ಬೆದರಿಸಿದ್ದಾರೆ. ಇದರಿಂದ ಕಂಗಲಾದ ಶಂಕರ್ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ ವಿವರಿಸಿದರು.
ಇದನ್ನೂ ಓದಿ: ಬೆಂಗಳೂರು: ಮಗು ಕೊಂದು ಡೆತ್‌ನೋಟ್ ಬರೆದಿಟ್ಟು ಮಹಿಳೆ ಆತ್ಮಹತ್ಯೆ