ಬೆಂಗಳೂರು: ಹಲವು ವರ್ಷಗಳಿಂದ ನಿರಂತರವಾಗಿ ನಗರದೆಲ್ಲೆಡೆ ಜೂಜು ಆಡಿಸುತ್ತಿದ್ದ ಆರೋಪ ಮೇರೆಗೆ ಇದೇ ಮೊದಲ ಬಾರಿಗೆ ಜೂಜುಕೋರನೋರ್ವನನ್ನು ಗೂಂಡಾ ಕಾಯ್ದೆಯಡಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನಗರದ ನಿವಾಸಿ ಹರಿರಾಜಶೆಟ್ಟಿ ಬಂಧಿತ ಆರೋಪಿ. ಜೂಜು ಆಡಿಸುವುದನ್ನೇ ಕಾಯಕ ಮಾಡಿಕೊಂಡಿದ್ದ ಈತ ನಗರದ ಕೆಲವೆಡೆ ರಿಕ್ರಿಯೇಶನ್ ಕ್ಲಬ್, ವಿಡಿಯೋ ಗೇಮ್ ಸೆಂಟರ್ ನಡೆಸುತ್ತಿದ್ದ. ಹಣದ ಪ್ರಭಾವ ತೋರಿ ಅದೃಷ್ಟದ ಜೂಜುಗಳನ್ನು ನಡೆಸುತ್ತಾ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ನಿರತನಾಗಿದ್ದ. ಈತನ ವಿರುದ್ಧ ವೈಯಾಲಿಕಾವಲ್, ಹೈಗ್ರೌಂಡ್, ಕಬ್ಬನ್ ಪಾರ್ಕ್, ಕೋರಮಂಗಲ, ಅಶೋಕ್ ನಗರ, ಕೆಪಿ ಅಗ್ರಹಾರ, ಬಸವೇಶ್ವರನಗರ ಹಾಗೂ ಇಂದಿರಾನಗರ ಪೊಲೀಸ್ ಠಾಣೆಗಳಲ್ಲಿ 2014 ರಿಂದ ಇಲ್ಲಿಯವರೆಗೆ 13 ಪ್ರಕರಣಗಳು ದಾಖಲಾಗಿವೆ.
ಈತನ ವಿರುದ್ಧ ಕ್ರಮ ಕೈಗೊಂಡಿದ್ದರೂ ಜೂಜು ಆಡಿಸುವುದನ್ನು ಮುಂದುವರೆಸಿದ್ದ. ಅಲ್ಲದೇ ಈತನ ವಿರುದ್ಧ ಕ್ರಮ ಕೈಗೊಂಡ ಅಧಿಕಾರಿಗಳಿಗೆ ತೇಜೋವಧೆ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದ. ನಿರಂತರ ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿ ಹಿನ್ನೆಲೆ ಗೂಂಡಾ ಕಾಯ್ದೆಯಡಿ ಬಂಧಿಸಿಸಲಾಗಿದೆ.
ಈ ಕಾಯ್ದೆಯಡಿ ಬಂಧಿಸಿದರೆ ಒಂದು ವರ್ಷದವರೆಗೂ ಜಾಮೀನು ಸಿಗುವುದಿಲ್ಲ. ನಿರಂತರ ಅಪರಾಧ ಪ್ರಕರಣಗಳಲ್ಲಿ ಪಾಲ್ಗೊಂಡು ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ತರುವವರ ವಿರುದ್ಧ ಗೂಂಡಾ ಕಾಯ್ದೆ ಹಾಕಲಾಗುತ್ತದೆ.