ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಇದೆ ಎನ್ನಲಾದ ಡ್ರಗ್ಸ್ ಜಾಲ ಆರೋಪ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ನಟಿ ರಾಗಿಣಿ ಆಪ್ತ ಶ್ರೀ ಅಲಿಯಾಸ್ ಸುಬ್ರಮಣಿಯನ್ಗೆ ಮೆಡಿಕಲ್ ಟೆಸ್ಟ್ ನಡೆಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಸದ್ಯ ತನಿಖೆ ವೇಳೆ ಈತ ಸಾಮಾನ್ಯ ಆಸಾಮಿ ಅಲ್ಲ ಅನ್ನೋ ವಿಚಾರ ಬಯಲಾಗಿದೆ.
ಈತನ ವಿಚಾರಣೆಯನ್ನು ಎಸಿಪಿ ಗೌತಮ್ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಪುನೀತ್ ನಡೆಸುತ್ತಿದ್ದಾರೆ. ಹಾಗೆ ಈ ಆರೋಪಿಯ ಹೇಳಿಕೆ ಆಧಾರದ ಮೇರೆಗೆ ಇನ್ನಷ್ಟು ಪೆಡ್ಲರ್ಗಳ ಹೆಸರುಗಳು ಹೊರಬರಲಿವೆ. ಈತ ಬಾಡಿಗೆ ಪಡೆಯುತ್ತಿದ್ದ ರೆಸಾರ್ಟ್, ಹೋಟೆಲ್, ಫಾರ್ಮ್ ಹೌಸ್ನಲ್ಲಿ ಡ್ರಗ್ಸ್ ಪೂರೈಕೆ ನಿರಂತರವಾಗಿ ನಡೆಯುತ್ತಿತ್ತು. ಹಾಗೆ ಈತ ಬಾಡಿಗೆ ಪಡೆಯುತ್ತಿದ್ದ ರೆಸಾರ್ಟ್ ನಲ್ಲಿ ಪ್ರಭಾವಿಗಳು ಭಾಗಿಯಾಗಿ ನಶೆ ಲೋಕದಲ್ಲಿ ತೇಲುತ್ತಿದ್ದರು ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ ಎನ್ನಲಾಗ್ತಿದೆ. ಸದ್ಯ ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ನಂತರ ಮುಂದಿನ ನಿರ್ಧಾರವನ್ನು ಅಧಿಕಾರಿಗಳು ಕೈಗೊಳ್ಳಲಿದ್ದಾರೆ.
ರಾಗಿಣಿ ಆಪ್ತ ರವಿಶಂಕರ್ ಪೊಲೀಸ್ ಬಲೆಗೆ ಬಿದ್ದ ದಿನದಿಂದಲೂ ಶ್ರೀಗಾಗಿ ಹುಡುಕಾಟ ಆರಂಭವಾಗಿತ್ತು. ರವಿಶಂಕರ್ ಮತ್ತು ವೈಭವ್ ಜೈನ್ ಇಬ್ಬರ ಮೊಬೈಲ್ನಲ್ಲಿ ಶ್ರೀ ಸಂಪರ್ಕ ಪತ್ತೆಯಾಗಿತ್ತು. ಇಬ್ಬರ ಬಳಿ ಶ್ರೀ ಯಾರು ಎಂದು ತೀವ್ರ ವಿಚಾರಣೆ ನಡೆಸಿದ್ದರೂ ಇಬ್ಬರು ಬಾಯ್ಬಿಟ್ಟಿರಲಿಲ್ಲ. ಹೀಗಾಗಿ ಇಬ್ಬರ ಮೊಬೈಲ್ ಜಪ್ತಿ ಮಾಡಿ ಪರಿಶೀಲನೆ ನಡೆಸಿದಾಗ ಮೊಬೈಲ್ ನಲ್ಲಿ ‘ಪಾರ್ಟಿ ವ್ಯವಸ್ಥೆ ಶ್ರೀ ಮಾಡುತ್ತಾರೆ’ ಎಂದು ವಾಟ್ಸಾಪ್ ಸಂದೇಶ ರವಿಶಂಕರ್ಗೆ ವೈಭವ್ ಜೈನ್ ಕಳುಹಿಸಿದ್ದ ಎಂದು ಹೇಳಲಾಗ್ತಿದೆ. ಮೊಬೈಲ್ ಪರಿಶೀಲನೆ ವೇಳೆ ಸಿಕ್ಕಿದ್ದ ನಂಬರ್ ಮತ್ತು ಸಂದೇಶದ ಬೆನ್ನತ್ತಿದ ಪೊಲೀಸರಿಗೆ ಸ್ಪಷ್ಟವಾಗಿ ಮಾಹಿತಿ ಸಿಕ್ಕಿರಲಿಲ್ಲ.
ಆದರೆ ಪ್ರಕರಣ ಸಂಬಂಧ ನಿರೂಪಕ ಅಕುಲ್ ಬಾಲಾಜಿ ಮತ್ತು ನಟ ಸಂತೋಷ್ ವಿಚಾರಣೆಗೆ ಕರೆದಾಗ ಸುಬ್ರಮಣಿಯನ್ ಅಸಲಿಯತ್ತು ಬೆಳಕಿಗೆ ಬಂದಿದೆ. ಈ ಶ್ರೀ ಪೇಜ್ 3 ಪಾರ್ಟಿಗಳಿಗೆ ರೆಸಾರ್ಟ್, ಫಾರ್ಮ್ ಹೌಸ್ ಅನ್ನು ಬಾಡಿಗೆಗೆ ಪಡೆಯುತ್ತಿದ್ದ ಎಂಬುದು ತಿಳಿದು ಬಂದಿದೆ.