ಬೆಂಗಳೂರು: ದಿನೇ ದಿನೆ ಏರುಗತಿಯಲ್ಲಿ ಸಾಗುತ್ತಿರುವ ಕೊರೊನಾ ಸೋಂಕು ಕಟ್ಟಿಹಾಕಲು ಸರ್ಕಾರ ಕರ್ಫ್ಯೂ ವಿಧಿಸಿದೆ. ಮತ್ತೊಂದೆಡೆ ಆಕ್ಸಿಜನ್ ಹಾಗೂ ಬೆಡ್ ಸಿಗದೆ ಸಾವನ್ನಪ್ಪುವವರ ಸಂಖ್ಯೆ ಅಧಿಕವಾಗತೊಡಗಿವೆ. ಈ ಮಧ್ಯೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಬೆಡ್ ಬ್ಲಾಕಿಂಗ್ ಅವ್ಯವಹಾರವನ್ನು ಬಯಲಿಗೆಳೆದ ಬೆನ್ನಲ್ಲೇ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿದ್ದಾರೆ. ಈ ಸಂಬಂಧ ಇಬ್ಬರು ವೈದ್ಯರು ಸೇರಿದಂತೆ ಎಂಟು ಮಂದಿಯನ್ನು ಸಿಸಿಬಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.
ಪ್ರಕರಣ ವರ್ಗಾವಣೆಯಾಗುತ್ತಿದ್ದಂತೆ ನಿನ್ನೆ ರಾತ್ರಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಜಯನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಪ್ರಕರಣ ಸಂಬಂಧಿಸಿದಂತೆ ಅಗತ್ಯ ಮಾಹಿತಿ ಕಲೆಹಾಕಿದ್ದರು. ಇಬ್ಬರು ವೈದ್ಯರು, ಡೇಟಾ ಎಂಟ್ರಿ ಆಪರೇಟರ್ಗಳು, ಅಸಿಸ್ಟೆಂಟ್ ಸೇರಿ 8 ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಪೈಕಿ ವೈದ್ಯರ ಪಾತ್ರವೇನು ಎಂಬುದರ ಬಗ್ಗೆ ಸಿಸಿಬಿ ಕೂಲಂಕಶವಾಗಿ ತನಿಖೆ ನಡೆಸುತ್ತಿದೆ.
ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣ ದಾಖಲಾಗಿವೆ. ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳಾದ ರೋಹಿತ್ ಹಾಗೂ ನೇತ್ರಾ ಎಂಬುವರನ್ನು ಬಂಧಿಸಿದರೆ, ಸಂಸದ ತೇಜಸ್ವಿ ಸೂರ್ಯ ಬಯಲಿಗೆಳೆದಿದ್ದ ಬೆಡ್ ಬ್ಲಾಕಿಂಗ್ ದಂಧೆ ಸಂಬಂಧ ಜಯನಗರ ಪೊಲೀಸ್ ಎರಡನೇಯ ಪ್ರಕರಣ ದಾಖಲಾಗಿದೆ.
ಜಯನಗರ ಪೊಲೀಸರು ನಿನ್ನೆ ಕಾರ್ಯಾಚರಣೆ ನಡೆಸಿ ನೇತ್ರಾ ಹಾಗೂ ರೋಹಿತ್ನನ್ನು ಬಂಧಿಸಿದ್ದರು. ಬೆಡ್ ಕೊಡಿಸುವುದಾಗಿ ವಾಟ್ಸಪ್ ಗ್ರೂಪ್ಗಳಲ್ಲಿ ಹರಿಬಿಡುತ್ತಿದ್ದ ಆರೋಪಿಗಳು ಕೊರೊನಾ ರೋಗಿಗಳನ್ನು ಗುರಿಯಾಗಿಸಿಕೊಂಡು ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದರಂತೆ.
ಇದುವರೆಗೂ ಬೆಡ್ಗೆ ತಲಾ 40 ಸಾವಿರ ರೂ, ಮತ್ತೊಂದು ಬೆಡ್ಗೆ 67 ಸಾವಿರದಂತೆ ಒಟ್ಟು 1.07 ಲಕ್ಷ ಹಣವನ್ನು ಆರೋಪಿಗಳು ವಸೂಲಿ ಮಾಡಿದ್ದರು. ಈ ಬಗ್ಗೆ ಸೂಕ್ತ ಮಾಹಿತಿ ಪಡೆದ ಇನ್ಸ್ಪೆಕ್ಟರ್ ಸುದರ್ಶನ್ ನೇತೃತ್ವದ ತಂಡ ಇಬ್ಬರನ್ನು ಬಂಧಿಸಿತ್ತು. ಸದ್ಯ ಇಬ್ಬರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
ಈ ಬಗ್ಗೆ ನಗರ ದಕ್ಷಿಣ ವಿಭಾಗ ಡಿಸಿಪಿ ಹರೀಶ್ ಪಾಂಡೆ ಪ್ರತಿಕ್ರಿಯಿಸಿದ್ದು, 'ಕೆಲವು ವಾಟ್ಸಪ್ ಗ್ರೂಪ್ನಲ್ಲಿ ಬೆಡ್ ಕೊಡಿಸುವುದಾಗಿ ಹೇಳಿ ಆರೋಪಿಗಳ ನಂಬರ್ ಹರಿದಾಡುತ್ತಿತ್ತು. ಈ ವೇಳೆ ಇವರಿಗೆ ಕರೆ ಬಂದಾಗ ಅವರಿಂದ ಹಣ ಪಡೆದು ಬೆಡ್ ಅಲಾಟ್ ಮಾಡುತ್ತಿದ್ದರು. ಆರೋಪಿಗಳು ಒಟ್ಟು ಐದು ಕೇಸ್ನಲ್ಲಿ ಭಾಗಿಯಾಗಿದ್ದು ಪತ್ತೆಯಾಗಿದೆ ಎಂದರು.
ಸಾಫ್ಟ್ವೇರ್ ಬಗ್ಗೆ ಬೆಡ್ ಲಾಕಿಂಗ್ ಮತ್ತು ಅನ್ಲಾಕಿಂಗ್ ಬಗ್ಗೆ ಕೆಲವು ಅಡಚಣೆ ಇತ್ತು. ಇದರ ಬಗ್ಗೆ ಸಂಶಯ ಬಂದಿದ್ದು, ಪ್ರತ್ಯೇಕ ಎಫ್ಐಆರ್ ಮಾಡಲಾಗಿದೆ. ಈ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ಮಾಡ್ತಿದ್ದಾರೆ ಎಂದು ತಿಳಿಸಿದರು.
ನಿನ್ನೆ ಬಂಧನವಾದ ಇಬ್ಬರು ಈವೆಂಟ್ ಮ್ಯಾನೇಜ್ಮೆಂಟ್ ಮಾಡುತ್ತಿದ್ದರು. ವಾರ್ ರೂಂ ಸಿಬ್ಬಂದಿ ಜೊತೆ ಸಂಪರ್ಕ ಇರುವ ಬಗ್ಗೆ ಮಾಹಿತಿ ಇದೆ. ಸಿಸಿಬಿ ಈ ಬಗ್ಗೆ ತನಿಖೆ ಮಾಡುತ್ತಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.
ಇದರ ಬೆನ್ನಲ್ಲೇ ಸಂಸದ ತೇಜಸ್ವಿ ಸೂರ್ಯರಿಂದ ಬಿಬಿಎಂಪಿ ವಾರ್ ರೂಮ್ನಲ್ಲಿ ಸಿಬ್ಬಂದಿ ಅವ್ಯವಹಾರ ನಡೆಸಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಹಿನ್ನೆಲೆ ವಾರ್ ರೂಮ್ ಮೇಲ್ವಿಚಾರಕರು ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಓದಿ: 45 ನಿಮಿಷದ ಅಂತರದಲ್ಲಿ ಕೋವಿಡ್ನಿಂದ ತಂದೆ-ತಾಯಿ ಸಾವು: ಅಂತ್ಯಕ್ರಿಯೆ ನಡೆಸಿದ ಹೆಣ್ಣು ಮಕ್ಕಳು