ಬೆಂಗಳೂರು : ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಬಿಬಿಎಂಪಿ ಬೆಡ್ ಬ್ಲಾಕ್ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಸಿಸಿಬಿ ನಗರದ ಪ್ರತಿಷ್ಠಿತ ಮೂರು ಆಸ್ಪತ್ರೆಗಳಲ್ಲಿನ ಬೆಡ್ ಬ್ಲಾಕ್ ದಂಧೆಯನ್ನು ಬಯಲಿಗೆಳೆದಿದೆ.
ನಿನ್ನೆಯಷ್ಟೇ ವಾರ್ ರೂಂ ಸಿಬ್ಬಂದಿ, ಡೇಟಾ ಎಂಟ್ರಿ ಆಪರೇಟರ್, ನರ್ಸ್ ಸೇರಿದಂತೆ 18 ಮಂದಿಯನ್ನು ಸಿಸಿಬಿ ವಿಚಾರಣೆ ನಡೆಸಿತ್ತು. ಅಲ್ಲದೇ ಬಂಧನಕ್ಕೊಳಗಾಗಿರುವ ಇಬ್ಬರು ವೈದ್ಯರು ಸೇರಿ ನಾಲ್ವರು ಆರೋಪಿಗಳನ್ನು ಕೂಲಂಕಶವಾಗಿ ವಿಚಾರಣೆ ನಡೆಸಿತ್ತು.
ಇದರೊಂದಿಗೆ ವಾರ್ ರೂಂಗಳ ಮೇಲೆ ದಾಳಿ ಮಾಡಿ ಬೆಡ್ ಬ್ಲಾಕ್ ಮಾಡಿರುವ ದತ್ತಾಂಶ ಹಾಗೂ ವಾರ್ ರೂಂಗಳಿಗೆ ಯಾರು ಬಂದಿದ್ದರು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿರುವ ಪೊಲೀಸರು ಮೂರು ಖಾಸಗಿ ಆಸ್ಪತ್ರೆಗಳಲ್ಲಿ ದಂಧೆ ನಡೆಯುತಿತ್ತು ಎಂಬುದನ್ನು ಪತ್ತೆ ಹಚ್ಚಿದ್ದಾರೆ.
ಇದನ್ನೂ ಓದಿ: ಔಷಧ ಕಂಪನಿಗಳ ವಿರುದ್ಧ ಗುಡುಗಿದ ಡಿಸಿಎಂ: ರೆಮ್ಡೆಸಿವಿರ್ ಕಂಪನಿಗಳಿಗೆ ನೋಟಿಸ್
ಬೆಡ್ ಬ್ಲಾಕ್ ಆಗುತ್ತಿದ್ದ ಆಸ್ಪತ್ರೆಗಳಿಗೆ ತೆರೆಳಿರುವ ಸಿಸಿಬಿ ಪೊಲೀಸರು ಬೆಡ್ ಬ್ಲಾಕ್ ಆಗುವಾಗ ಪಾಳಿಯಲ್ಲಿ ಯಾವ ವೈದ್ಯರು ಕರ್ತವ್ಯದಲ್ಲಿದ್ದರು, ಯಾವ ಸಿಬ್ಬಂದಿ ಇದ್ದರು ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ.
ಇದಕ್ಕೆ ಸಂಬಂಧಪಟ್ಟ ವೈದ್ಯಕೀಯ ಸಿಬ್ಬಂದಿ ಹಾಗೂ ಆರೋಗ್ಯ ಮಿತ್ರ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಅಕ್ರಮ ಎಸಗಿರುವುದು ಸಾಬೀತಾದರೆ ಶೀಘ್ರದಲ್ಲಿ ಬಂಧಿಸುವುದಾಗಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.