ಬೆಂಗಳೂರು: ಪಾಲಿಕೆ ಹಣಕಾಸು ವಿಭಾಗದಲ್ಲಿ ಅಧಿಕಾರಿಗಳಿಂದಲೇ ನಾಲ್ಕು ಕೋಟಿ ರೂಪಾಯಿ ವಂಚನೆ ನಡೆದ ಬೆನ್ನಲ್ಲೇ, ಮುಂದೆ ಈ ರೀತಿಯಾಗದಂತೆ ತಡೆಯಲು ಎಲ್ಲಾ ಕಚೇರಿಗಳ ಒಳಗೂ, ಹೊರಗೂ ಸಿಸಿ ಕ್ಯಾಮೆರಾ ಅಳವಡಿಸಲು ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ಸೂಚನೆ ನೀಡಿದ್ದಾರೆ.
![c c camera surveillance for bbmp office](https://etvbharatimages.akamaized.net/etvbharat/prod-images/6205071_thumb.jpg)
ಬಿಬಿಎಂಪಿಯ ಎಲ್ಲಾ ಕಚೇರಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಕಚೇರಿ ಮುಖ್ಯಸ್ಥರು ಕ್ರಮ ಕೈಗೊಳ್ಳಬೇಕು. ಪಾಲಿಕೆಯ ಪ್ರಮುಖ ದಾಖಲಾತಿಗಳು, ಕಡತಗಳು, ಮಾಹಿತಿಗಳ ಗೌಪ್ಯತೆ ಕಾಪಾಡಬೇಕು. ಲೆಕ್ಕಪತ್ರ, ಕಂದಾಯ, ಕಾಮಗಾರಿ, ಅರಣ್ಯ, ಆಸ್ತಿಗಳ ವಿಭಾಗದಲ್ಲಿ ಮಾಹಿತಿ ಸೋರಿಕೆಯಾಗದಂತೆ ಕ್ರಮಕೈಗೊಳ್ಳಬೇಕೆಂದು ಸುತ್ತೋಲೆ ಹೊರಡಿಸಿದ್ದಾರೆ.
![c c camera surveillance for bbmp office](https://etvbharatimages.akamaized.net/etvbharat/prod-images/6205071_thum.jpg)
ಅಲ್ಲದೆ ಯಾವುದೇ ರೀತಿಯ ಸಂಶಯಾಸ್ಪದ ನಡೆ ಕಂಡು ಬಂದರೆ, ಸಿಸಿಟಿವಿ ಫುಟೇಜ್ ಸಂರಕ್ಷಿಸಿಡಬೇಕು. ಕಚೇರಿಯಲ್ಲಿ ರಾತ್ರಿ ಏಳು ಗಂಟೆಯ ಬಳಿಕ ಸಿಬ್ಬಂದಿ, ನೌಕರರು, ಕೆಲಸ ನಿರ್ವಹಿಸಬಾರದು. ಅನಧಿಕೃತ ವ್ಯಕ್ತಿಗಳು ಕಚೇರಿ ಒಳಗಡೆ ವಾಹನ ನಿಲುಗಡೆ ಮಾಡದಂತೆ ಕ್ರಮ ಕೈಗೊಳ್ಳಬೇಕು ಹಾಗೂ ಅನೇಕ ಎಚ್ಚರಿಕೆಯ ಕ್ರಮಗಳನ್ನು ಪಾಲಿಸಲು, ಪಾಲಿಕೆಯ ಎಲ್ಲಾ ವಾರ್ಡ್ ಕಚೇರಿ, ವಲಯ ಕಚೇರಿಗಳಿಗೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ಈಗಾಗಲೇ ಕೇಂದ್ರ ಕಚೇರಿ ಹಾಗೂ ವಲಯ ಕಚೇರಿಯ ಕೆಲವೆಡೆ ಮಾತ್ರ ಸಿಸಿ ಕ್ಯಾಮೆರಾ ಇದ್ದು, ಇನ್ಮುಂದೆ ಪ್ರತೀ ಕೋಣೆಗಳಿಗೂ ಸಿಸಿ ಕ್ಯಾಮೆರಾ ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿದೆ.