ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ರೋಷನ್ ಬೇಗ್ ಪುತ್ರ ರುಮಾನ್ ಬೇಗ್ ಮನೆಯ ಮೇಲೂ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮಗ ರುಮಾನ್ ಬೇಗ್ ಅವರ ಜಯಮಹಲ್ ರಸ್ತೆಯ ಬಳಿ ರೆಡಿಫಿಸ್ ಕಚೇರಿ ಹಾಗೂ ಅತಿಥಿ ಗೃಹದಲ್ಲಿ ದೆಹಲಿಯ 13 ಸಿಬಿಐ ಅಧಿಕಾರಿಗಳ ತಂಡ ಪರಿಶೀಲನೆ ಮಾಡುತ್ತಿದೆ. ಮನೆಯಲ್ಲಿರುವ ದಾಖಲಾತಿ, ಬ್ಯಾಂಕ್ ವಿವರ, ಮೊಬೈಲ್ ಪರಿಶೀಲನೆ ನಡೆಸುತ್ತಿದ್ದು, ಮನೆಯ ಸದಸ್ಯರು, ಕೆಲಸಗಾರರ ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣ ಸಂಬಂಧ ರೋಷನ್ ಬೇಗ್ರನ್ನು ನಿನ್ನೆ ಸಿಬಿಐ ಅಧಿಕಾರಿಗಳು ಬಂಧಿಸಿದ್ದು, ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಐಎಂಎ ಪ್ರಕರಣದಲ್ಲಿ ಆರೋಪಿ ಮನ್ಸೂರ್ನಿಂದ 400 ಕೋಟಿ ರೂ. ಪಡೆದಿರುವ ಆರೋಪ ರೋಷನ್ ಬೇಗ್ ಮೇಲಿದೆ. ಈ ಹಿಂದೆ ಐಎಂಎ ಮುಖ್ಯಸ್ಥ ಮನ್ಸೂರ್ ಕೂಡ ವಿಡಿಯೋ ಮೂಲಕ ರೋಷನ್ ಬೇಗ್ ಹೆಸರನ್ನು ಹೊರಹಾಕಿದ್ದರು.
ಅನಾರೋಗ್ಯ ಇರುವ ಕಾರಣ ಜಾಮೀನು ಕೋರಿ ಅರ್ಜಿ ಸಲ್ಲಿಸಿದರೆ, ನ್ಯಾಯಾಲಯ ನೀಡುವ ತೀರ್ಪಿನ ಮೇಲೆ ಬೇಗ್ ಭವಿಷ್ಯ ನಿಂತಿದೆ.