ಬೆಂಗಳೂರು: ಮುದ್ರಾಂಕ ಹಾಗೂ ನೋಂದಣಿ ಇಲಾಖೆಯ ಕಾವೇರಿ ವೆಬ್ಸೈಟ್ ತಿರುಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ತನಿಖೆ ಚುರುಕು ಪಡೆದಿದೆ. ಈ ಸಂಬಂಧ ಓರ್ವ ಲ್ಯಾಂಡ್ ಡೆವಲಪರ್ನನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಮೂಲಕ ಪ್ರಕರಣದ ವಿವಿಧ ಆಯಾಮಗಳು ಗೋಚರಿಸುತ್ತಿದ್ದು, ತನಿಖೆ ಮತ್ತಷ್ಟು ಚುರುಕಾಗುವ ಸಾಧ್ಯತೆಗಳಿವೆ.
ದಾಸನಪುರದ ಸೋಮಣ್ಣ ಎಂಬಾತ ಬಂಧಿತ ಆರೋಪಿ. ಕೃಷಿ ಜಮೀನುಗಳನ್ನು ಕಂದಾಯ ಜಮೀನುಗಳಾಗಿ ಪರಿವರ್ತಿಸುವ ನೆಪದಲ್ಲಿ ಖರೀದಿಗಾರರು ಮಾತ್ರವಲ್ಲ, ಮಾರಾಟಗಾರರಿಗೂ ಕೂಡಾ ಈತ ವಂಚಿಸಿದ್ದ ಎಂಬ ಆರೋಪ ಕೂಡಾ ಕೇಳಿ ಬಂದಿದೆ. ಇದೇ ಆರೋಪದ ಮೇಲೆ ಸಿಸಿಬಿ ಪೊಲೀಸರು ಬಂಧಿಸಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ವೆಬ್ಸೈಟ್ ತಿರುಚಿದ ಆರೋಪಕ್ಕೆ ಸಂಬಂಧಿಸಿದಂತೆ ಮುದ್ರಾಂಕ ಇಲಾಖೆ ಉಪಮಹಾನಿರೀಕ್ಷಕ ತ್ರಿಲೋಕ್ ಚಂದ್ರ ಅವರು ದೂರನ್ನು ನೀಡಿದ್ದರು. ತನಿಖೆ ಕೈಗೊಂಡಿದ್ದ ಸಿಸಿಬಿ ಇದೇ ಮೊದಲ ಬಾರಿಗೆ ಓರ್ವ ಆರೋಪಿಯನ್ನು ಬಂಧಿಸಿದೆ.
ತ್ರಿಲೋಕ್ ಚಂದ್ರ ನೀಡಿದ ದೂರಿನಡಿ ತನಿಖೆ ನಡೆಸಿದ್ದ ಸಿಸಿಬಿ ಇದೇ ಮೊದಲ ಬಾರಿಗೆ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿದೆ. ಈ ಆರೋಪಿಯು ದಾಸನಪುರ ಹಾಗೂ ಲಗ್ಗೆರೆಯ ಉಪನೋಂದಣಿ ಕಚೇರಿಗಳ ವ್ಯಾಪ್ತಿಯಲ್ಲಿ ರೈತರು ಜಮೀನುಗಳನ್ನು ರೆವಿನ್ಯೂ ಸೈಟ್ಗಳಾಗಿ ಪರಿವರ್ತಿಸಿ ಸೂಕ್ತ ಬೆಲೆ ನೀಡುವುದಾಗಿ ವಂಚಿಸುತ್ತಿದ್ದ. ಇನ್ನೊಂದೆಡೆ ಭೂಮಿ ಖರೀದಿಸುವ ಖರೀದಿಗಾರರಿಗೆ ರೆವಿನ್ಯೂ ಸೈಟ್ ಎಂದು ನಂಬಿಸಿ ಮಾರಾಟ ಮಾಡುತ್ತಿದ್ದ. ಲಗ್ಗೆರೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಒಂದೇ ದಿನ 40 ಸೈಟ್ಗಳನ್ನು ರಿಜಿಸ್ಟ್ರಾರ್ ಮಾಡಿಸಿದ್ದ ಅನ್ನೋದು ಸಿಸಿಬಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.