ಬೆಂಗಳೂರು: ಕಾವೇರಿ 5ನೇ ಹಂತದ ಕಾಮಗಾರಿಗೆ ಕಾರ್ಮಿಕರು ಹಾಗೂ ಸಲಕರಣೆಗಳ ಸಮಸ್ಯೆ ಎದುರಾಗಿದ್ದು, ಈ ತಿಂಗಳಿನಲ್ಲಿ ಪೂರ್ಣಗೊಳ್ಳಬೇಕಿದ್ದ ಯೋಜನೆ ತಡವಾಗುತ್ತಿದೆ. ಯೋಜನೆ ಪೂರ್ಣವಾದ ಬಳಿಕ ನಗರದ ಹೊರವಲಯದ ಮಹದೇವಪುರ, ದಾಸರಹಳ್ಳಿ, ಆರ್‌ಆರ್ ನಗರ, ಬ್ಯಾಟರಾಯನಪುರ ಮತ್ತು ಬೊಮ್ಮನಹಳ್ಳಿ ವ್ಯಾಪ್ತಿಯ 110 ಗ್ರಾಮಗಳಿಗೆ ಕಾವೇರಿ ನೀರು ಪೂರೈಕೆ ಆಗಲಿದೆ. ಆದರೆ ಸದ್ಯ ಯೋಜನೆ ಪೂರ್ಣಗೊಳ್ಳಲು ಕಾರ್ಮಿಕರ ಕೊರತೆ ಎದುರಾಗಿದೆ. ಯುರೋಪ್‌ನಿಂದ ಉಪಕರಣಗಳನ್ನು ಆಮದು ಮಾಡಿಕೊಳ್ಳುಲಾಗುತ್ತಿದ್ದು, ಅದೂ ನಗರಕ್ಕೆ ತಡವಾಗಿ ತಲುಪುತ್ತಿರುವ ಕಾರಣ ಯೋಜನೆ ಕುಂಟುತ್ತಾ ಸಾಗುತ್ತಿದೆ.
ಯೋಜನೆ ಕಾಮಗಾರಿಗೆ ಕುಶಲ ಕಾರ್ಮಿಕರ ಅಗತ್ಯವಿದ್ದು, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಬಿಹಾರದಿಂದ ಕಾರ್ಮಿಕರನ್ನು ರಾಜ್ಯಕ್ಕೆ ಕರೆತರಬೇಕಾಗಿದೆ. ಹೀಗಾಗಿ ಸಮಸ್ಯೆಗಳು ಎದುರಾಗುತ್ತಿವೆ. ಕೋವಿಡ್ ಬಳಿಕ ಕಾರ್ಮಿಕರ ಸಮಸ್ಯೆ ಎದುರಾಗಿದೆ. ಕಾಮಗಾರಿ ಕಾರ್ಯಗಳ ನಿರ್ವಹಿಸುವ ಗುತ್ತಿಗೆದಾರರು ಶೀಘ್ರದಲ್ಲಿ ಕಾರ್ಮಿಕರನ್ನು ಕರೆತರಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ವಿದೇಶದಿಂದ ಬಿಡಿಭಾಗಗಳು ತಲುಪಲು ವಿಳಂಬ: ವಿದೇಶಗಳಲ್ಲಿ ತಯಾರಾಗಿರುವ ಬಿಡಿಭಾಗಗಳು ರಾಜ್ಯಕ್ಕೆ ತಲುಪುವುದು ಹಲವು ಕಾರಣಗಳಿಂದ ವಿಳಂಬವಾಗುತ್ತಿದೆ. ಇತ್ತೀಚೆಗೆ ಹೆಚ್ಚಿನ ಸಾಮರ್ಥ್ಯದ ಪಂಪ್‌ಗಳು ಮತ್ತು ಜಪಾನ್‌ನಿಂದ ಮೋಟಾರ್‌ಗಳು, ಟರ್ಕಿಯಿಂದ ಸ್ಲೂಸ್ ವಾಲ್ವ್ಗಳು ಬಂದಿವೆ. ಆಸ್ಟ್ರೇಲಿಯಾದಿಂದ ಪಂಪ್ ಮಾನಿಟರಿಂಗ್ ಸಿಸ್ಟಮ್‌ಗಳೂ ಬಂದಿವೆ. ಐರೋಪ್ಯ ದೇಶಗಳಾದ ಫ್ರಾನ್ಸ್, ಜರ್ಮನಿ ಮತ್ತು ಸ್ವಿಟ್ಜರ್‌ಲ್ಯಾಂಡ್ ನಿಂದ ನೀರು ಶುದ್ಧೀಕರಣ ಮತ್ತು ಸೆನ್ಸಾರ್‌ಗಳು ಬರುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.
ಕಾಮಗಾರಿ ಶೇಕಡ 85ರಷ್ಟು ಪೂರ್ಣ: ತೊರೆಕಾಡನಹಳ್ಳಿಯಿಂದ ವಾಜರಹಳ್ಳಿಯವರೆಗೆ 70 ಕಿ.ಮೀ ದೂರ 3000 ಎಂಎಂ ಗಾತ್ರದ ಪೈಪ್ಗಳನ್ನು ಅಳವಡಿಸಲಾಗುತ್ತಿದೆ. ಈ ಕೆಲಸಗಳು ಶೇ.85ರಷ್ಟು ಪೂರ್ಣಗೊಂಡಿವೆ. ಗ್ರಾಮಗಳಿಗೆ ನೀರು ಹರಿಸಲು ಈಗಿರುವ ಟಿ.ಕೆ. ಹಳ್ಳಿ, ಹಾರೋಹಳ್ಳಿ, ತಾತಗುಣಿಯಲ್ಲಿ ಹೊಸ ಪಂಪಿಂಗ್ ಸ್ಟೇಷನ್ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದಿದ್ದಾರೆ.
ಕಾವೇರಿ 5ನೇ ಹಂತಕ್ಕೆ ಪೈಪ್ ಲೈನ್ ಗಳ ಕಾರ್ಯ ಪೂರ್ಣಗೊಂಡಿದೆ. ಟಿ ಕೆ ಹಳ್ಳಿಯಲ್ಲಿ 775 ಎಂಎಲ್ ಡಿ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕ ನಿರ್ಮಿಸಲಾಗುತ್ತಿದೆ. ಎಲ್ಲಾ ವಿತರಣಾ ಪೈಪ್‌ಲೈನ್ ಹಾಕುವ ಕಾರ್ಯ ಪೂರ್ಣಗೊಂಡಿದೆ. ಟಿ ಕೆ ಹಳ್ಳಿಯಲ್ಲಿ 775 ಎಂಎಲ್ ಡಿ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಡಿಸೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಬಿಡಬ್ಲ್ಯೂಎಸ್‌ಎಸ್‌ಬಿ ಅಧ್ಯಕ್ಷ ಎನ್ ಜಯರಾಮ್ ಮಾಹಿತಿ ನೀಡಿದ್ದಾರೆ.
ನೆನೆಗುದಿಗೆ ಬಿದಿದ್ದ ಈಜಿಪುರ ಮೇಲ್ಸೇತುವೆಯಲ್ಲಿ ವಿದ್ಯುತ್ ದೀಪಗಳ ಅಳವಡಿಗೆ
ಐದು ವರ್ಷಗಳ ಹಿಂದೆ ಆರಂಭವಾಗಿದ್ದ ಈಜಿಪುರ ಮೇಲ್ಸೇತುವೆ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಈಗ ಹೊಸ ಗುತ್ತಿಗೆದಾರರಿಂದ ಕಾಮಗಾರಿ ಪುನರಾರಂಭವಾಗಲು ವೇದಿಕೆ ಸಿದ್ಧವಾಗಿದೆ. ಇತ್ತೀಚಿಗೆ ಲೈಟ್ ಕಂಬಗಳನ್ನು ನೆಟ್ಟು, ವಿದ್ಯುತ್ ದೀಪ ಅಳವಡಿಸಿರುವುದು ಇದಕ್ಕೆ ಪುಷ್ಟಿ ನೀಡುತ್ತಿದೆ.
ಕೋರಮಂಗಲದ 100 ಅಡಿ ಮುಖ್ಯ ರಸ್ತೆಯಲ್ಲಿ ಹಾದು ಹೋಗುವ ಈ ಮೇಲ್ಸೇತುವೆ ಈಜಿಪುರ ಮುಖ್ಯ ರಸ್ತೆ ಜಂಕ್ಷನ್, ಹೊರ ವರ್ತುಲ ರಸ್ತೆಯಿಂದ ಕೇಂದ್ರೀಯ ಸದನ ಜಂಕ್ಷನ್‌ಗೆ ಸಂಪರ್ಕ ಕಲ್ಪಿಸುತ್ತದೆ. ಬರೋಬ್ಬರಿ 2.5 ಕಿ. ಮೀ. ಉದ್ದದ ಈ ಮೇಲ್ಸೇತುವೆ ನಿರ್ಮಾಣ ಮಾಡಲು ಟೆಂಡರ್ ಅನ್ನು ಕೋಲ್ಕತ್ತಾ ಮೂಲದ ಸಂಸ್ಥೆಗೆ ನೀಡಲಾಗಿದ್ದು, ಒಟ್ಟು 81 ಪಿಲ್ಲರ್‌ಗಳನ್ನು ನಿಮರ್ಮಾಣಮಾಡಬೇಕಿತ್ತು. ಆದರೆ ಸಂಸ್ಥೆ 67 ಪಿಲ್ಲರ್‌ಗಳನ್ನಷ್ಟೇ ನಿರ್ಮಿಸಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ಈಜಿಪುರ ಫ್ಲೈಓವರ್ನಲ್ಲಿ ಕಂಬಗಳ ಮೇಲೆ ಕೆಲವರು ವಿದ್ಯುತ್ ದೀಪಗಳನ್ನು ಹಾಕಿದ್ದು, ಈ ಫೊಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ರಾಜಧಾನಿಯ ಹೊರ ವಲಯದ ರಸ್ತೆಗಳ, ಮೇಲ್ಸೇತುವೆ, ನವೀಕರಣ ಕಾಮಗಾರಿ ಕೆಲವೇ ತಿಂಗಳಿನಲ್ಲಿ ಪೂರ್ಣ
ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ನಿವಾರಣೆಗಾಗಿ 2019ರಲ್ಲಿ ಆರಂಭಿಸಲಾಗಿದ್ದ ನಗರದ ಹೊರ ವಲಯದ ರಸ್ತೆ ಹಾಗೂ ಮೇಲ್ಸೇತುವೆ ರಸ್ತೆ ನವೀಕರಣ ಕಾಮಗಾರಿಯ ಮೊದಲ ಹಂತ ಮುಂದಿನ ಕೆಲವೇ ತಿಂಗಳಲ್ಲಿ ಪೂರ್ಣವಾಗಲಿದೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು 2,095 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಕೈಗೊಂಡಿತ್ತು. ಹೊಸಕೋಟೆ-ಬೂದಿಗೆರೆ ಮತ್ತು ನೆಲಮಂಗಲ- ಮಧುರೆ ಕಾರಿಡಾರಿನ ಮೊದಲ ಹಂತದ ಕಾಮಗಾರಿ 2024ರ ಜನವರಿಯೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಹೊಸಕೋಟೆ-ಬೂದಿಗೆರೆ ಕಾರಿಡಾರ್‌ನ ಒಟ್ಟು ಉದ್ದ 20.11 ಕಿ.ಮೀ. ಯಿದ್ದು, ನೆಲಮಂಗಲ-ಮಧುರೆ ಕಾರಿಡಾರ್ ರೈಲ್ವೆ ಮೇಲ್ಸೇತುವೆ ಮತ್ತು ರೈಲ್ವೆ ಕೆಳಸೇತುವೆಯನ್ನು ಹೊಂದಿದೆ. ಒಟ್ಟು 15.25 ಕಿ.ಮೀ. ಉದ್ದ ಹಾದು ಹೋಗುತ್ತದೆ.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ: ಏಕ ಸದಸ್ಯ ತನಿಖಾ ಆಯೋಗ ನೇಮಿಸಿ ಸರ್ಕಾರ ಆದೇಶ