ಬೆಂಗಳೂರು: ಲಾಕ್‌ಡೌನ್ ಪರಿಣಾಮದಿಂದ ನಮ್ಮ ಉದ್ಯಮಕ್ಕೆ ಭಾರೀ ನಷ್ಟ ಸಂಭವಿಸಿದೆ. ಹೀಗೆ ಮುಂದುವರಿದರೆ ನಮ್ಮ ಪಾಡು ಬೀದಿ ಪಾಲಾಗುತ್ತೆ ಎಂದು ಉದ್ಯಮಸ್ಥರು ತಮ್ಮ ಸಂಕಷ್ಟ ತೋಡಿಕೊಳ್ಳುತ್ತಿದ್ದಾರೆ.
ಏಪ್ರಿಲ್, ಮೇ, ಜೂನ್ ತಿಂಗಳು ಬಂತೆಂದರೆ ಮದುವೆ, ನಾಮಕರಣ, ಗೃಹ ಪ್ರವೇಶ ಹೀಗೆ ನಾನಾ ರೀತಿಯ ಸಮಾರಂಭಗಳು ನಡೆಯೋದು ಸಾಮಾನ್ಯ. ಆದ್ರೆ ಕಳೆದ ಒಂದೂವರೆ ವರ್ಷದಿಂದ ವಕ್ಕರಿಸಿದ ಕೊರೊನಾ ಸೋಂಕಿನಿಂದ ದೇಶದ ಜನತೆ ತತ್ತರಿಸಿದ್ದಾರೆ. ಅದ್ರಲ್ಲೂ ಸಮಾರಂಭಗಳಿಗೆ ಆಹಾರ ಸರಬರಾಜು ಮಾಡುತ್ತಿದ್ದ ಕೇಟರಿಂಗ್ ಉದ್ಯಮಗಳು ನಷ್ಟದಲ್ಲಿವೆ.
ರಾಜ್ಯದಲ್ಲಿ ಲಾಕ್‌ಡೌನ್ ಘೋಷಿಸಿದ್ದರೂ ಸಹ ಮದುವೆ ಸಮಾರಂಭಗಳನ್ನು ನೆರವೇರಿಸಲು ಸರ್ಕಾರ ಅವಕಾಶ ನೀಡಿದೆ. ಎಲ್ಲರೂ ಕೋವಿಡ್ ನಿಯಮಗಳನ್ನು ಪಾಲಿಸಿ ಮದುವೆ, ಸಮಾರಂಭಗಳು ನಡೆಸುತ್ತಿದ್ದಾರೆ. ಸಮಾರಂಭಗಳಲ್ಲಿ 40ಕ್ಕೂ ಹೆಚ್ಚು ಜನ ಭಾಗವಹಿಸುವಂತಿಲ್ಲ ಎಂದು ಕಟ್ಟುನಿಟ್ಟಿನ ರೂಲ್ಸ್ ಕೂಡ ಮಾಡಲಾಗಿದೆ. ಹೀಗಿರುವಾಗ ಕೇಟರಿಂಗ್ ಉದ್ಯಮಕ್ಕೆ ಯಾರೂ ಕೂಡ ಅವಲಂಬಿತರಾಗುತ್ತಿಲ್ಲ ಎಂದು ಉದ್ಯಮಿ ಸುಬ್ರಮಣಿ ಹೇಳಿದರು.
ಮೊದಲೆಲ್ಲ ಇಂತಹ ಸಮಾರಂಭಗಳಿಗೆ ಸಾವಿರಾರು ಅತಿಥಿಗಳನ್ನು ಆಹ್ವಾನಿಸುತ್ತಿದ್ದರು. ಹೀಗಾಗಿ ಜನ ಕೇಟರಿಂಗ್ ಉದ್ಯಮಗಳಿಗೆ ಅವಲಂಬಿತರಾಗುತ್ತಿದ್ದರು. ಆದ್ರೆ ಈಗ ಕೋವಿಡ್ ಇರುವ ಕಾರಣ ಈ ಎಲ್ಲವನ್ನೂ ತಡೆ ಹಿಡಿಯಲಾಗಿದೆ. ಇಂದ್ರಿಂದಾಗಿ ಕೇಟರಿಂಗ್ ಉದ್ಯಮ ನೆಲಕ್ಕಚ್ಚಿದೆ ಎಂದರು.
ನಮ್ಮಲ್ಲಿ 60 ರಿಂದ 70 ಜನ ಕೆಲಸ ಮಾಡುತ್ತಿದ್ದಾರೆ. ಎಲ್ಲರಿಗೂ ಸಂಬಂಳ ನೀಡಬೇಕಾದ್ರೆ ನಮ್ಮ ಉದ್ಯೋಗ ಚೆನ್ನಾಗಿ ನಡೆಯಬೇಕು. ಆದ್ರೆ ಈ ಲಾಕ್‌ಡೌನ್ ಎಫೆಕ್ಟ್ನಿಂದ ಅವರ ಜೊತೆ ನಮ್ಮ ಬಾಳು ಸಹ ಬೀದಿಗೆ ಬರುತ್ತಿದೆ. ಸರ್ಕಾರ ಇತ್ತ ಗಮನಹರಿಸಿ ನಮ್ಮ ಸಹಾಯಕ್ಕೆ ಮುಂದಾಗಬೇಕೆಂದು ಮನವಿ ಮಾಡುತ್ತಿದ್ದೇನೆ ಎಂದು ಉದ್ಯಮಿ ಸುಬ್ರಮಣಿ ಹೇಳಿದರು.