ಬೆಂಗಳೂರು: ವಿಧಾನಸೌಧಕ್ಕೆ ಅಗ್ನಿಶಾಮಕ ವಾಹನ ದೌಡಾಯಿಸುತ್ತಿದ್ದಂತೆ ಅಲ್ಲಿನ ಸಿಬ್ಬಂದಿಯಲ್ಲಿ ಆತಂಕ, ಕುತೂಹಲ ಮನೆ ಮಾಡಿತ್ತು. ಶಕ್ತಿಸೌಧದಲ್ಲಿ ಏನಾದರೂ ಅಗ್ನಿ ಅವಘಡವಾಗಿದಿಯೇ ಎಂದು ನೌಕರರಿಗೆ ಕೊಂಚ ಗಾಬರಿಯಾಗಿತ್ತು.
ಆದರೆ, ಆಗಿದ್ದು ಅಗ್ನಿ ಅನಾಹುತವಲ್ಲ. ಬೆಕ್ಕಿನ ರಕ್ಷಣೆ ಮಾಡಲು ಅಗ್ನಿಶಾಮಕ ದಳದ ಸಿಬ್ಬಂದಿ ಕ್ರೇನ್ ಸಮೇತ ಬಂದಿರುವುದು ಗೊತ್ತಾಯಿತು. ಆಗ ಎಲ್ಲರೂ ನಿಟ್ಟುಸಿರು ಬಿಟ್ಟರು.
ವಿಧಾನಸೌಧದ ಎರಡನೇ ಮಹಡಿಯ ವಿಂಡೋ ಆರ್ಚ್ ಮೇಲೆ ಕೆಳಗಿಳಿಯಲಾಗದೇ ಬೆಕ್ಕು ಒದ್ದಾಡಿ ಕೂಗುತ್ತಿತ್ತು. ಈ ವಿಷಯ ಗೊತ್ತಾದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ದೊಡ್ಡ ಕ್ರೇನ್ ಮೂಲಕ ಅಗ್ನಿಶಾಮಕ ದಳದ ಸಿಬ್ಬಂದಿ ಬೆಕ್ಕು ರಕ್ಷಣೆ ಮಾಡಲು ಮುಂದಾದರು. ಈ ಸಂದರ್ಭದಲ್ಲಿ ಅಗ್ನಿಶಾಮಕ ಸಿಬ್ಬಂದಿ ಹರಸಾಹಸವನ್ನೇ ಮಾಡಬೇಕಾಯಿತು.
ಕ್ರೇನ್ ಸಾಹಸ ನೋಡಿ ಗಾಬರಿಯಾಗಿ ಕುತೂಹಲದಿಂದ ವಿಧಾನಸೌಧದ ಸಿಬ್ಬಂದಿ ನೋಡುತ್ತಾ ನಿಂತರು. ಆದರೂ ಬೆಕ್ಕಿನ ರಕ್ಷಣೆ ಮಾಡಲಾಗಲಿಲ್ಲ. ಬೆಕ್ಕು ಕೆಳಗಿಳಿಯಲಾಗದೇ ವಿಚಲಿತಗೊಂಡಿತ್ತು. ಏನು ಮಾಡಿದ್ರೂ ಅವರ ಕೈಯಲ್ಲಿ ಬೆಕ್ಕು ಹಿಡಿಯಲಾಗಲಿಲ್ಲ.
ಮತ್ತೊಂದು ಅಸ್ತ್ರ ಎಂಬಂತೆ ಬೆಕ್ಕು ಹಿಡಿಯಲು ಎರಡನೇ ಮಹಡಿಗೆ ಏಣಿ ಮೇಲೆ ವ್ಯಕ್ತಿಯೊಬ್ಬರನ್ನು ಕಳುಹಿಸಲಾಯಿತು. ಅವರು ಬ್ಯಾಗ್ ಹಿಡಿದು ಬೆಕ್ಕನ್ನು ಹಿಡಿಯಲು ಮುಂದಾದರು. ಆಗ ಆ ವ್ಯಕ್ತಿಯ ಕೈಗೆ ಸಿಗದೇ ಪರಚಿ ಒದ್ದಾಡಿ ತಪ್ಪಿಸಿಕೊಳ್ಳಲು ಜಿಗಿಯಿತು. ಎರಡನೇ ಮಹಡಿಯಿಂದ ನೇರ ಕೆಳಗೆ ಲಾನ್ ಮೇಲಿನ ಹುಲ್ಲಿನ ಮೇಲೆ ಬಿದ್ದ ಬೆಕ್ಕು ಯಾರ ಕೈಗೂ ಸಿಗದೇ ಓಡಿ ಹೋಯಿತು.