ಬೆಂಗಳೂರು : ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಪಂಕ್ತಿ ಭೋಜನ ಸಂದರ್ಭದಲ್ಲಿ ಜಾತಿ ನಿಂದನೆ ಮಾಡಿದ್ದರೆಂದು ಮಹಿಳೆಯೊಬ್ಬರು ಆರೋಪಿಸಿ ಭೋಜನ ಶಾಲೆ ಸಿಬ್ಬಂದಿ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಪ್ರಕರಣ ರದ್ದುಕೋರಿ ಭೋಜನ ಶಾಲೆ ಸಿಬ್ಬಂದಿ ಶಂಕರ ಭಟ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಬಿ.ಎ. ಪಾಟೀಲ ಅವರಿದ್ದ ಪೀಠ, ಸುದೀರ್ಘ ವಾದ ಪ್ರತಿವಾದ ಆಲಿಸಿದ ಬಳಿಕ ಈ ಆದೇಶ ನೀಡಿದೆ. ಪ್ರಕರಣದಲ್ಲಿ ದೂರುದಾರರು ಆರೋಪಿಸಿರುವಂತೆ ಯಾವುದೇ ನಾಗರಿಕ ಹಕ್ಕುಗಳ ಉಲ್ಲಂಘನೆಯಾಗಿಲ್ಲ. ಮಠದಲ್ಲಿನ ಸಂಪ್ರದಾಯಗಳ ಪ್ರಕಾರ ಸಿಬ್ಬಂದಿ ಸಾಮಾನ್ಯ ಭೋಜನ ಶಾಲೆಗೆ ತೆರಳುವಂತೆ ದೂರುದಾರರಿಗೆ ಸೂಚಿಸಿರುವುದು ಜಾತಿ ನಿಂದನೆ ಎನಿಸುವುದಿಲ್ಲ ಎಂದು ಪ್ರಕರಣ ರದ್ದುಗೊಳಿಸಿದೆ.
ಮಠದ ಪರ ವಾದ ಮಂಡಿಸಿದ್ದ ವಕೀಲರು, ದೂರುದಾರರು ಸ್ಥಳೀಯ ಮಹಿಳೆ. ಹೀಗಾಗಿ ಅವರಿಗೆ ಮಠದ ನೀತಿ ನಿಯಮಗಳು ತಿಳಿದಿವೆ. ಬ್ರಾಹ್ಮಣರಿಗೆ ಮೀಸಲಾಗಿದ್ದ ಜಾಗದಲ್ಲಿ ಅವರು ಭೋಜನಕ್ಕೆ ಕುಳಿತಿದ್ದರು. ಆಗ ಅವರ ಮನವೊಲಿಸಿ ಸಾಮಾನ್ಯ ಭೋಜನ ಶಾಲೆಗೆ ಕಳುಹಿಸಲಾಗಿತ್ತು. ಇದರಲ್ಲಿ ಅವರ ಯಾವುದೇ ನಾಗರಿಕ ಹಕ್ಕುಗಳ ಉಲ್ಲಂಘನೆಯಾಗಿಲ್ಲ. ಅಲ್ಲದೆ, ಮಠದಲ್ಲಿ ಕೆಲವು ಸಂಪ್ರದಾಯಗಳಿದ್ದು, ಅದರಂತೆ ನಡೆದುಕೊಂಡು ಬರಲಾಗುತ್ತಿದೆ. ದೇವರ ದರ್ಶನಕ್ಕೆ ಯಾವುದೇ ಅಡ್ಡಿ ಮಾಡಿಲ್ಲ ಎಂದು ವಾದಿಸಿದ್ದರು.
2014ರಲ್ಲಿ ಮಣಿಪಾಲ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿಯಾಗಿದ್ದ ವನಿತಾ ಎನ್. ಶೆಟ್ಟಿ ಎಂಬುವರು ತಾವು ಮಠದ ಭೋಜನ ಶಾಲೆಗೆ ತೆರಳಿದ್ದಾಗ ಅಲ್ಲಿನ ಸಿಬ್ಬಂದಿ ಶಂಕರ ಭಟ್ ತಮ್ಮನ್ನು ಪ್ರತ್ಯೇಕಗೊಳಿಸಿ ಜಾತಿ ನಿಂದನೆ ಮತ್ತು ಮಾನ ಹಾನಿ ಮಾಡಿದ್ದಾರೆ ಎಂದು ಕ್ರಿಮಿನಲ್ ದೂರು ದಾಖಲಿಸಿದ್ದರು.