ಬೆಂಗಳೂರು: ಬಿಡುಗಡೆ ಸಜ್ಜಾಗಿದ್ದ ಕನ್ನಡ ಚಿತ್ರವೊಂದರ ನಟ ಹಾಗೂ ನಿರ್ಮಾಪಕ ಹಣ ವಂಚನೆ ಆರೋಪದಡಿ ಪ್ರೊಡಕ್ಷನ್ ಮ್ಯಾನೇಜರ್ಗಳ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ನಟ ಹಾಗೂ ನಿರ್ಮಾಪಕ ಕಿರಣ್ ನಾರಾಯಣ್ ಎಂಬುವರು ಪ್ರೊಡಕ್ಷನ್ ಮ್ಯಾನೇಜರ್ ಗಳಾದ ಚಂದನ್ ಹಾಗೂ ಹನುಮಂತೇಶ್ ಇಬ್ಬರ ವಿರುದ್ಧ ದೂರು ನೀಡಿದ ಮೇರೆಗೆ ಗಿರಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
ಬಿಡುಗಡೆಗೆ ಸಿದ್ಧವಾಗಿರುವ ಕನ್ನಡದ ಹೊಸ ಚಿತ್ರ ಸ್ನೇಹರ್ಷಿ ಸಿನಿಮಾದ ನಾಯಕನಟ ನಿರ್ದೇಶಕ ಹಾಗೂ ನಿರ್ಮಾಪಕನಾಗಿರುವ ಕಿರಣ್ ನಾರಾಯಣ್ ಎರಡು ವರ್ಷಗಳ ಹಿಂದೆ ಲಕ್ಷ್ಮಿ ಬೆಟೆರಾಯ ಕಂಬೈನ್ಸ್ ಬ್ಯಾನರ್ ಅಡಿ ಸ್ನೇಹರ್ಷಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದರು. ಈ ವೇಳೆ ಚಂದನ್ ಹಾಗೂ ಹನುಮಂತೇಶ್ ಇಬ್ಬರು ಪ್ರೊಡಕ್ಷನ್ ಮ್ಯಾನೇಜರ್ ಆಗಿ ಚಿತ್ರತಂಡಕ್ಕೆ ಸೇರಿದ್ದರು. ನಟ ಕಿರಣ್ ನಾರಾಯಣ್ ತಾವೇ ನಟಿಸಿ ನಿರ್ದೇಶಿಸಿ ನಿರ್ಮಾಣ ಮಾಡಿದ್ದರಿಂದ ಸಿನಿಮಾದ ಇತರೆ ಕೆಲಸಗಳನ್ನ ನೋಡಿಕೊಳ್ಳುತ್ತೇವೆ ಎಂದು ಆರೋಪಿಗಳು ಮುಂದಾಗಿದ್ದರಂತೆ. ಇನ್ನು ನಟ ಕಿರಣ್ ಹಾಗೂ ಅವರ ತಾಯಿ ಸಹಿ ಹಾಕಿದ ಚೆಕ್ ಗಳನ್ನ ಸ್ವಂತ ಖರ್ಚಿಗೆ ಬಳಸಿಕೊಂಡಿರುವ ಆರೋಪ ಮಾಡಲಾಗಿದೆ. ಜಯನಗರದ ಫೆಡರಲ್ ಬ್ಯಾಂಕ್ ನಿಂದ 5 ಲಕ್ಷ ಹಣವನ್ನ ತಮ್ಮ ಅಕೌಂಟ್ ಗೆ ವರ್ಗಾಯಿಸಿಕೊಂಡಿದ್ದಲ್ಲದೇ, ಬಿಡುಗಡೆಗೆ ಸಿದ್ಧವಾಗಿರುವ ಸಿನಿಮಾದ ದಾಖಲೆ ಪ್ರತಿ ಹಾಗೂ ಲೆಟರ್ ಹೆಡ್ ಗಳನ್ನ ಕದ್ದೋಯ್ದಿದ್ದಾರೆ ಎಂದು ನಟ ಕಿರಣ್ ನಾರಾಯಣ್, ಪ್ರೊಡಕ್ಷನ್ ಮ್ಯಾನೇಜರ್ ಗಳ ವಿರುದ್ಧ ಆರೋಪಿಸಿದ್ದಾರೆ.
ಪೊಲೀಸ್ ಎಫ್ಐಆರ್ ಆಗುತ್ತಿದ್ದಂತೆ ಪ್ರೊಡಕ್ಷನ್ ಮ್ಯಾನೇಜರ್ ಚಂದನ್ ಅವರು ನಟ ಕಿರಣ್ ರಿಗೆ ಧಮಕಿ ಹಾಕಿದ್ದಾರಂತೆ. ಚನ್ನಮ್ಮನಕೆರೆ ಬಳಿಯ ನಟನ ನಿವಾಸದ ಬಳಿ ತೆರಳಿ ಅವರ ತಾಯಿಗೆ ಜೀವಬೆದರಿಕೆ ಹಾಕಿದ್ದಾರಂತೆ.ಸದ್ಯ ಪ್ರಕರಣ ಸಂಬಂಧ ನಟ ಕಿರಣ್ ಹಾಗೂ ಅವರ ತಾಯಿ ಪ್ರಭಾ ಗಿರಿನಗರ ಹಾಗೂ ಚನ್ನಮ್ಮನಕೆರೆ ಪೊಲೀಸ್ ಠಾಣೆಗಳಲ್ಲಿ ಎರಡು ಪ್ರತ್ಯೇಕ ದೂರು ದಾಖಲಿಸಿದ್ದಾರೆ. ಚನ್ನಮ್ಮನಕೆರೆ ಪೊಲೀಸರು ಚಂದನ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.