ಬೆಂಗಳೂರು: ಇಂದು ವರಮಹಾಲಕ್ಷೀ ಪೂಜೆ ಹಾಗೂ ಬಕ್ರೀದ್ ಹಬ್ಬ ಇರುವ ಹಿನ್ನೆಲೆ ಜನ ಸಾಮಾಜಿಕ ಅಂತರವಿಲ್ಲದೆ, ಮಾಸ್ಕ್ ಹಾಕದೇ ಮೈಮರೆತು ಮಾರುಕಟ್ಟೆಯಲ್ಲಿ ಹೂವು, ಖರೀದಿಸುತ್ತಿರುವ ದೃಶ್ಯ ಕಂಡು ಬಂತು. ಈ ಸಂಬಂಧ ದಕ್ಷಿಣ ವಿಭಾಗದ ಡಿಸಿಪಿ ಡಾ. ರೋಹಿಣಿ ಕಟೋಚ್ ಅವರ ತಂಡ ವಿಶೇಷ ಕಾರ್ಯಾಚರಣೆ ನಡೆಸಿ ಹಲವರ ವಿರುದ್ಧ ಪ್ರಕರಣ ದಾಖಲಿಸಿದೆ.
ನಗರದಲ್ಲಿ ಕೊರೊನಾ ಸೋಂಕನ್ನು ತಡೆಗಟ್ಟಲು ಇತ್ತೀಚೆಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ನಿರ್ಗಮಿತ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು, ಜನರು ಕೊರೊನಾ ಸೋಂಕನ್ನು ಮರೆತು ನಿಯಮ ಉಲ್ಲಂಘಿಸಿದರೆ ಎನ್. ಡಿ. ಎಂ. ಎ ಕಾಯ್ದೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಪೊಲೀಸ್ ಸಿಬ್ಬಂದಿಗೆ ಸೂಚಿಸಿದ್ದರು. ಈ ಹಿನ್ನೆಲೆ ಕಳೆದ ನಾಲ್ಕು ದಿನಗಳಿಂದ ದಕ್ಷಿಣ ವಿಭಾಗ ಪೊಲೀಸರು ನಿಯಮ ಉಲ್ಲಂಘನೆ ಮಾಡಿರುವ 100 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪುಟ್ಟೇನಹಳ್ಳಿಯಲ್ಲಿ-19, ಸುಬ್ರಮಣ್ಯಪುರದ -11, ಬಸವನಗುಡಿಯ-11, ಕುಮಾರಸ್ವಾಮಿ ಲೇಔಟ್- 5, ತಲಘಟ್ಟಪುರದ -11, ಜೆ. ಪಿ. ನಗರದ- 9, ಜಯನಗರದ 3, ಸಿದ್ದಾಪುರದ 4 ಹೀಗೆ ದಕ್ಷಿಣ ವಿಭಾಗ ವ್ಯಾಪ್ತಿಯಲ್ಲಿ ಬರುವ ಠಾಣೆಗಳಲ್ಲಿ ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಕ್ರಮ ಕೈಗೊಂಡು ದಂಡ ವಸೂಲಿ ಮಾಡಿದ್ದಾರೆ.
ವಸ್ತುಗಳನ್ನು ಕೊಳ್ಳಲು ಬರುವ ಗ್ರಾಹಕರನ್ನು ಸರಿಯಾಗಿ ನಿರ್ವಹಿಸಿದ ಕೆಲ ಅಂಗಡಿ ಮಾಲೀಕರ ವಿರುದ್ಧವೂ ಕೇಸ್ ದಾಖಲಿಸಿದ್ದಾರೆ. ಸದ್ಯ ವಿಶೇಷ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ.