ಬೆಂಗಳೂರು : ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ಗುಂಡಿಕ್ಕಿ ಎರಡು ಕಡವೆಗಳನ್ನು ಹತ್ಯೆ ಮಾಡಿದ್ದ ಪ್ರಕರಣದಲ್ಲಿ ದಂಡಾಧಿಕಾರಿ (ಮ್ಯಾಜಿಸ್ಟ್ರೇಟ್) ಪೂರ್ವಾನುಮತಿ ಇಲ್ಲದೇ ಪ್ರಥಮ ವರ್ತಮಾನ ವರದಿ (ಎಫ್‌ಐಆರ್) ದಾಖಲಿಸಿರುವುದು ಕಾನೂನು ಬಾಹಿರ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧ ಚಿಕ್ಕಮಗಳೂರಿನ ಮಲ್ಲಂದೂರು ಠಾಣಾ ಪೊಲೀಸರು 2017ರಲ್ಲಿ ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಅತ್ತರ್ ಅಹ್ಮದ್ ಹಾಗೂ ರಫೀಕ್ ಅಹ್ಮದ್ ಸೇರಿದಂತೆ ಹಾಸನ ಜಿಲ್ಲೆಯ ಸಕಲೇಶಪುರದ 15 ಮಂದಿ ಆರೋಪಿಗಳು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರ ನ್ಯಾಯಪೀಠ, ಎಲ್ಲ ಆರೋಪಿಗಳ ವಿರುದ್ಧದ ಪ್ರಕರಣ ರದ್ದು ಮಾಡಿ ಆದೇಶಿಸಿದೆ.
ಅಲ್ಲದೆ, ಅಸಂಜ್ಞೇಯ ಅಪರಾಧಗಳಲ್ಲಿ ಎಫ್‌ಐಆರ್ ದಾಖಲಿಸಬೇಕಾದಲ್ಲಿ ಮ್ಯಾಜಿಸ್ಟ್ರೇಟ್ ಅನುಮತಿ ಕಡ್ಡಾಯವಾಗಿದೆ. ಆದರೆ, ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಪ್ರಕರಣದಲ್ಲಿ ಆರೋಪಿಗಳು ಆರೋಪ ಮುಕ್ತರಾಗುತ್ತಿದ್ದಾರೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ-1956ರ ಸೆಕ್ಷನ್ 30 ಮತ್ತು 35ರ ಅಡಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಎರಡೂ ಸೆಕ್ಷನ್ ಅಡಿಯ ಕೃತ್ಯಗಳು ಅಸಂಜ್ಞೇಯ ಅಪರಾಧಗಳಾಗಿವೆ. ಈ ಸಂಬಂಧ ಎಫ್‌ಐಆರ್ ದಾಖಲಿಸಬೇಕಾದರೆ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ-1973ರ ಸೆಕ್ಷನ್ 155(2) ಅಡಿ ಮ್ಯಾಜಿಸ್ಟೇಟ್ ಅವರಿಂದ ಆದೇಶ (ಅನುಮತಿ) ಪಡೆಯಬೇಕು. ಆದರೆ, ಈ ಪ್ರಕರಣದಲ್ಲಿ ದಂಡಾಧಿಕಾರಿಯಿಂದ ಆದೇಶ ಪಡೆಯದೇ ಎಫ್‌ಐಆರ್ ದಾಖಲಿಸಿದ್ದು, ಈ ಕ್ರಮ ಕಾನೂನು ಬಾಹಿರ ಮತ್ತು ಕಾನೂನಿನ ದುರ್ಬಳಕೆಯಾಗಿದೆ. ಆದ್ದರಿಂದ ಎಫ್‌ಐಆರ್ ರದ್ದುಪಡಿಸಲಾಗುತ್ತಿದೆ ಎಂದು ಆದೇಶದಲ್ಲಿ ನ್ಯಾಯಪೀಠ ತಿಳಿಸಿದೆ.
ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲರು ವಾದ ಮಂಡಿಸಿ, ಎರಡು ಕಡವೆ ಕೊಲ್ಲಲು ಪರವಾನಗಿ ಪಡೆದ ಬಂದೂಕು ಬಳಸಲಾಗಿದೆ ಎಂಬುದಾಗಿ ಎಫ್‌ಐಆರ್ ಆರೋಪಿಸಲಾಗಿದೆ. ಆ ಆರೋಪವನ್ನು ಒಪ್ಪಿದರೂ, ಅದು ಭಾರತೀಯ ಶಸ್ತ್ರಾಸ್ತ ಕಾಯ್ದೆಯ 3, 7, 25, 37, 30 ಮತ್ತು 35 ಅಡಿ ಅಪರಾಧ ಕೃತ್ಯವಾಗುವುದಿಲ್ಲ. ಸೆಕ್ಷನ್ 30 ಮತ್ತು 35 ಅಡಿ ಆರೋಪಗಳು ಅಸಂಜ್ಞೇಯ ಅಪರಾಧ ಕೃತ್ಯಗಳಾಗಿವೆ. ಈ ಎರಡು ಸೆಕ್ಷನ್ ಅಡಿ ಎಫ್‌ಐಆರ್ ದಾಖಲಿಸಬೇಕಾದರೆ ಮ್ಯಾಜಿಸ್ಟ್ರೇಟ್ ಅವರಿಂದ ಆದೇಶ (ಪೂರ್ವಾನುಮತಿ ಅನುಮತಿ) ಪಡೆಯಬೇಕಿತ್ತು ಎಂದು ಕೋರ್ಟ್ ಗಮನಕ್ಕೆ ತಂದರು. ಈ ಅಂಶವನ್ನು ಪುರಸ್ಕರಿಸಿದ ನ್ಯಾಯಪೀಠ ಅರ್ಜಿದಾರರ ವಿರುದ್ಧದ ಎಫ್‌ಐಆರ್ ರದ್ದುಪಡಿಸಿದೆ.
ಪ್ರಕರಣದ ಹಿನ್ನೆಲೆ ಏನು ?: ಪ್ರಕರಣ ಆರೋಪಿಗಳಾದ ರಫೀಕ್ ಅಹ್ಮದ್ ಮತ್ತು ಇತರ ಆರೋಪಿಗಳು 2017ರ ಜ.1ರಂದು ಎರಡು ಪರವಾನಗಿ ಬಂದೂಕು ಬಳಸಿ ಚಿಕ್ಕಮಗಳೂರು ಜಿಲ್ಲೆಯ ತಣಿಗೆ ಬೈಲು ವನ್ಯಜೀವಿ ವಲಯದಲ್ಲಿ ಎರಡು ಕಡವೆಗಳನ್ನು ಬೇಟೆಯಾಡಿ ಸಾಯಿಸಿದ್ದರು. ಪ್ರಕರಣ ಸಂಬಂಧ ವನ್ಯಜೀವಿ ವಲಯದ ಸಹಾಯಕ ಸಂರಕ್ಷಣಾ ಪೊಲೀಸ್ ಆಗಿದ್ದ ಸಣ್ಣಬಸಪ್ಪ ಅವರು ವನ್ಯಜೀವಿ (ಸಂರಕ್ಷಣೆ) ಕಾಯ್ದೆ-1972, ಕರ್ನಾಟಕ ಅರಣ್ಯ ಕಾಯ್ದೆ-1963ರ ವಿವಿಧ ಸೆಕ್ಷನ್‌ಗಳ ಅಡಿ ಚಿಕ್ಕಮಗಳೂರು ಮಲ್ಲಂದೂರು ಪೊಲೀಸ್ ಠಾಣೆಗೆ ಖಾಸಗಿ ದೂರು ಸಲ್ಲಿಸಿದ್ದರು.
ಆದರೆ, ಪೊಲೀಸರು ಮಾತ್ರ ಒಟ್ಟು 16 ಆರೋಪಿಗಳ ವಿರುದ್ಧ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ-1959ರ ಸೆಕ್ಷನ್ 3, 7, 25, 27, 30 ಮತ್ತು 35ರ ಅಡಿ ಎಫ್‌ಐಆರ್ ದಾಖಲಿಸಿದ್ದರು. ಎಫ್‌ಐಆರ್ ದಾಖಲಿಸಿ ಮ್ಯಾಜಿಸ್ಟ್ರೇಟ್‌ರಿಂದ ಪೂರ್ವಾನುಮತಿಯೂ ಪಡೆದಿರಲಿಲ್ಲ. ಪ್ರಕರಣ ಚಿಕ್ಕಮಗಳೂರು 2ನೇ ಹೆಚ್ಚುವರಿ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ವಿಚಾರಣೆಗೆ ಬಾಕಿಯಿತ್ತು. ಪ್ರಕರಣ ಸಂಬಂಧ ತಮ್ಮ ವಿರುದ್ಧದ ಎಫ್‌ಐಆರ್ ಮತ್ತು ಅಧೀನ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಯನ್ನು ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ : ಪಂಚಮಸಾಲಿ ಲಿಂಗಾಯತ ಮೀಸಲಾತಿ ಮಧ್ಯಂತರ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಿದ ಸರ್ಕಾರ