ಬೆಂಗಳೂರು: ''ವಿದ್ಯುತ್ ತಂತಿ ತಗುಲಿ ತಾಯಿ ಹಾಗೂ ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗೆ ತಾಂತ್ರಿಕ ಸಹಾಯದ ಅಗತ್ಯವಿದೆ. ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ಹಾಗೂ ಎಫ್ಎಸ್ಎಲ್ ಅಧಿಕಾರಿಗಳ ವರದಿಯನ್ನು ಆಧರಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಆರೋಪಿತ ಅಧಿಕಾರಿಗಳನ್ನು ಬಂಧಿಸಿ ಜಾಮೀನಿನ ಆಧಾರದಲ್ಲಿ ಬಿಡುಗಡೆ ಮಾಡಲಾಗಿದೆ'' ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.
ನಗರದಲ್ಲಿಂದು ಈ ಕುರಿತು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ''ತಾಯಿ- ಮಗುವಿನ ಮೃತದೇಹಗಳ ಹಸ್ತಾಂತರಿಸುವುದಕ್ಕಿಂತ ಮೊದಲೇ ಆರೋಪಿತ ಅಧಿಕಾರಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿರುವ ವಿಚಾರ ಗಮನಕ್ಕೆ ಬಂದಿದೆ. ಕಾನೂನಿನ ಅನ್ವಯ ಆರೋಪಿಗಳನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಗಿದೆ. ದುರ್ಘಟನೆ ನಡೆದಿರುವುದು ದುರಾದೃಷ್ಟಕರ. ನಿರ್ಲಕ್ಷ್ಯತನದಿಂದ ಈ ಅವಘಡ ಸಂಭವಿಸಿದೆ. ಅದಾಗ್ಯೂ ಸಹ ತನಿಖೆಗೆ ಎಫ್ಎಸ್ಎಲ್ ಅಧಿಕಾರಿಗಳು ಹಾಗೂ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ನೀಡುವ ವರದಿಯ ಅಗತ್ಯವಿದೆ. ಈಗಾಗಲೇ ಸ್ಥಳ ಪರಿಶೀಲನೆ ಮಾಡಲಾಗಿದ್ದು, ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು'' ಎಂದರು.
ಪಾದಚಾರಿ ಮಾರ್ಗದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ವೈರ್ ತುಳಿದ ಪರಿಣಾಮ ವಿದ್ಯುತ್ ಪ್ರವಹಿಸಿ ತಾಯಿ ಹಾಗೂ ಮಗು ಸಾವನ್ನಪ್ಪಿದ್ದ ಘಟನೆ ಭಾನುವಾರ ಬೆಳಗ್ಗೆ ಕಾಡುಗೋಡಿ ಠಾಣಾ ವ್ಯಾಪ್ತಿಯ ಹೋಪ್ ಫಾರ್ಮ್ ಸಮೀಪದಲ್ಲಿ ಜರುಗಿತ್ತು. ವಿದ್ಯುತ್ ಪ್ರವಹಿಸಿ ಸೌಂದರ್ಯ (23) ಹಾಗೂ 9 ತಿಂಗಳ ಹೆಣ್ಣು ಮಗು ಸುವಿಕ್ಸಲಿಯ ಸಾವನ್ನಪ್ಪಿದ್ದರು. ಪತಿ ಸಂತೋಷ್ ತೀವ್ರವಾಗಿ ಗಾಯಗೊಂಡಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಕಾಡುಗೋಡಿ ಠಾಣೆಯ ಪೊಲೀಸರು, ಕಾರ್ಯನಿರ್ವಾಹಕ ಅಭಿಯಂತರ ಶ್ರೀರಾಮ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸುಬ್ರಹ್ಮಣ್ಯ, ಸಹಾಯಕ ಅಭಿಯಂತರ ಚೇತನ್, ಕಿರಿಯ ಅಭಿಯಂತರ ರಾಜಣ್ಣ, ಸ್ಟೇಷನ್ ಆಪರೇಟರ್ ಮಂಜುನಾಥ್ಅವರನ್ನು ಬಂಧಿಸಿದ್ದರು. ಬಳಿಕ ಆರೋಪಿಗಳನ್ನು ಪೊಲೀಸ್ ಠಾಣಾ ಜಾಮೀನಿನ ಅನ್ವಯ ಬಿಡುಗಡೆ ಮಾಡಿದ್ದರು.
ಇದನ್ನೂ ಓದಿ: ಸಾರ್ವಜನಿಕವಾಗಿ ಬೆಳ್ಳಿ ಲಾಂಗ್ ಹಿಡಿದು ದರ್ಶನ್ ಪೋಸ್: ಪೊಲೀಸ್ ಆಯುಕ್ತರು ಹೇಳಿದ್ದೇನು?