ಬೆಂಗಳೂರು: ನಗರದ ಬ್ಯಾಡರಹಳ್ಳಿಯಲ್ಲಿ ವ್ಯಕ್ತಿಯೊಬ್ಬರ ಮನೆಯಲ್ಲಿ ಮತಾಂತರ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಈ ಕುರಿತು ಆರ್ಎಸ್ಎಸ್ ಕಾರ್ಯಕರ್ತರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಬ್ಯಾಡರಹಳ್ಳಿಯ ನಾರಾಯಣಸ್ವಾಮಿ ಎನ್ನುವವರ ಮನೆಯಲ್ಲಿ 80ಕ್ಕೂ ಅಧಿಕ ಮಕ್ಕಳನ್ನು ಸೇರಿಸಿ ಕ್ರೈಸ್ತ ಪ್ರಾರ್ಥನೆ ಮಾಡಿಸಲಾಗುತ್ತಿದೆ ಎಂದು ಸ್ಥಳೀಯರು ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಷ್ಟೇ ಅಲ್ಲದೆ ಮಕ್ಕಳಿಂದ ಪ್ರಾರ್ಥನೆ ಮಾಡಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ದೂರಿನ ಆಧಾರದ ಮೇಲೆ ಪೊಲೀಸರು, ನಾರಾಯಣಸ್ವಾಮಿ ಮನೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ಆ ಮನೆಯಲ್ಲಿ ನೂರಾರು ಮಕ್ಕಳು ಇರುವುದು ಖಚಿತವಾಗಿದ್ದರೂ ಈ ಎಲ್ಲ ಮಕ್ಕಳಿಗೆ ಪ್ರಾರ್ಥನೆ ಮಾತ್ರ ಮಾಡಿಸಲಾಗುತ್ತಿತ್ತು. ಮತಾಂತರವೇನೂ ಮಾಡುತ್ತಿಲ್ಲ ಎಂದು ನಾರಾಯಣಸ್ವಾಮಿ ಕುಟುಂಬಸ್ಥರು ಹೇಳಿಕೆ ನೀಡಿದ್ದಾರೆ.
ಮಕ್ಕಳಿಗೆ ಪ್ರಾರ್ಥನೆ ಮಾಡಿಸುವ ಉದ್ದೇಶ ಏನಿತ್ತು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ, ಕೋವಿಡ್ ನಿಯಮ ಉಲ್ಲಂಘಿಸಿದ ನಾರಾಯಣಸ್ವಾಮಿ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಭೂ ವಿವಾದದಿಂದ ಎರಡು ಗುಂಪುಗಳ ನಡುವೆ ಮಾರಾಮಾರಿ: ಗುಂಡು ಹಾರಿಸಿಕೊಂಡ ವಿಡಿಯೋ ವೈರಲ್