ಬೆಂಗಳೂರು: ಅಮಾವಾಸ್ಯೆ ದಿನದಂದು ಮನೆಯವರನ್ನು ದೇವಸ್ಥಾನಕ್ಕೆ ಕಳುಹಿಸಿದ ನಂತರ ಅದೇ ದಿನ ಮನೆಗೆ ತೆರಳಿ ನಗ-ನಾಣ್ಯ ದೋಚಿ ನಿಂಬೆ ಹಣ್ಣು ಇಟ್ಟು ಯಾರೋ ಮಾಟ ಮಾಡಿಸಿದ್ದಾರೆ ಎಂದು ಯಾಮಾರಿಸುತ್ತಿದ್ದ ಜ್ಯೋತಿಷಿ ವಿರುದ್ಧ ಇಲ್ಲಿನ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಸಪೇಟೆಯ ಸುರೇಶ್ ಪಾಟೀಲ್ ಮೇಲೆ ಮನೆಯೊಡತಿ ಇಂದಿರಾ ಎಂಬವರು ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪತಿ ಮತ್ತು ಮಕ್ಕಳೊಂದಿಗೆ ಆಳ್ಳಾಲಸಂದ್ರದಲ್ಲಿ ಮಹಿಳೆ ವಾಸವಾಗಿದ್ದು, ಜೀವನಕ್ಕಾಗಿ ಮನೆಕೆಲಸ ಮಾಡುತ್ತಿದ್ದರು. ಮಗಳಿಗೆ ಕುಣಿಗಲ್ನ ಹೆಬ್ಬೂರು ನಿವಾಸಿ ಗೋವಿಂದ ಗೌಡ ಎಂಬವರೊಂದಿಗೆ ಮದುವೆ ಮಾಡಿಕೊಟ್ಟಿದ್ದರು. ಕೆಲ ತಿಂಗಳ ಬಳಿಕ ದಂಪತಿ ನಡುವೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತವರು ಮನೆಗೆ ಬರುತ್ತಿದ್ದ ಮಗಳ ಕುರಿತು ಇಂದಿರಾ ಚಿಂತಾಕ್ರಾಂತರಾಗಿದ್ದರು. ಈ ಬಗ್ಗೆ ಇಂದಿರಾ ಕೂಡ ತನ್ನ ತಾಯಿಯೊಂದಿಗೆ ದುಃಖ ತೋಡಿಕೊಂಡಿದ್ದಳು. ಸಮಸ್ಯೆಗೆ ಪರಿಹಾರವೆಂಬಂತೆ ಆಕೆಯ ತಾಯಿಯು ತನಗೆ ಜ್ಯೋತಿಷಿ ಸುರೇಶ್ ಪಾಟೀಲ್ ಪರಿಚಯವಿದ್ದು, ಅವರ ಬಳಿ ವಿಚಾರಿಸು ಎಲ್ಲವೂ ಸರಿಹೋಗಲಿದೆ ಎಂದಿದ್ದಳು.
ಮನೆ ದೋಚಿ ನಿಂಬೆಹಣ್ಣು ಇಡುತ್ತಿದ್ದ ಜ್ಯೋತಿಷಿ: ಅದರಂತೆ ಕಳೆದ ಡಿಸೆಂಬರ್ ತಿಂಗಳಿನಲ್ಲಿ ಮಹಿಳೆಯ ಮನೆಗೆ ಬಂದ ಜ್ಯೋತಿಷಿ ಎಲ್ಲವನ್ನೂ ಗಮನಿಸಿದ್ದಾನೆ. ನಿಮ್ಮ ಮಗಳ ಜೀವನ ಸರಿಪಡಿಸುತ್ತೇನೆ. ಅಮಾವಾಸ್ಯೆ ದಿನದಂದು ಮನೆಯಲ್ಲಿ ಯಾರೂ ಇರಬಾರದು. ಎಲ್ಲರೂ ದೇವಸ್ಥಾನಕ್ಕೆ ಹೋಗಿ ಎಂದು ಸೂಚಿಸಿದ್ದ. ಇದರಂತೆ ಇಂದಿರಾ ಕುಟುಂಬಸ್ಥರು ದೇವಸ್ಥಾನಕ್ಕೆ ತೆರಳಿದ್ದರು. ಇದೇ ಸರಿಯಾದ ಸಮಯ ಅಂದುಕೊಂಡ ಆರೋಪಿ ಮನೆಗೆ ಬಂದು ಬೀರುವಿನಲ್ಲಿದ್ದ 5 ಲಕ್ಷ ರೂ ಬೆಲೆಯ ಚಿನ್ನಾಭರಣ ದೋಚಿದ್ದ. ಬಳಿಕ ಬಿರುವಿನಲ್ಲಿ ನಿಂಬೆ ಹಣ್ಣು ಇಟ್ಟು ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕೆಲ ದಿನಗಳ ಬಳಿಕ ಕುಟುಂಬಸ್ಥರನ್ನು ಭೇಟಿಯಾಗಿ ಮನೆಗೆ ಬಂದು ಬೀರು ತೆರೆಯಿಸಿ ತಾನೇ ಇಟ್ಟಿದ್ದ ನಿಂಬೆಹಣ್ಣು ತೋರಿಸಿದ್ದಾನೆ. ನಿಮ್ಮ ಬೀಗರು ಮಾಟ, ಮಂತ್ರ ಮಾಡಿಸಿ ಚಿನ್ನದೊಡವೆ ದೋಚಿದ್ದಾರೆ. 65 ದಿನಗಳ ಕಾಲಾವಕಾಶ ಕೊಟ್ಟರೆ ದೋಚಿರುವ ಒಡವೆಗಳನ್ನು ಮರಳಿ ಕೊಡಿಸುವುದಾಗಿ ನಂಬಿಸಿ ಎಸ್ಕೇಪ್ ಆಗಿದ್ದಾನೆ. ಎರಡು ತಿಂಗಳ ಬಳಿಕ ಪೋನ್ ಮಾಡಿದಾಗ ಸ್ಚಿಚ್ ಆಫ್ ಮಾಡಿಕೊಂಡಿದ್ದ. ಬಳಿಕ ಈತನ ಮೇಲೆ ಅನುಮಾನಗೊಂಡು ಯಲಹಂಕ ಪೊಲೀಸರಿಗೆ ಜ್ಯೋತಿಷಿ ವಿರುದ್ಧ ದೂರು ದಾಖಲಿಸಿದ್ದಾರೆ.
ಬೆಂಗಳೂರು- ಪ್ರತ್ಯೇಕ ಪ್ರಕರಣದಲ್ಲಿ ನಾಲ್ವರ ಬಂಧನ: ಚಂದ್ರಾಲೇಔಟ್ ಪೊಲೀಸರು ತನಿಖೆ ವೇಳೆ ಘಟನಾ ಸ್ಥಳದಲ್ಲಿ ದೊರೆತಿದ್ದ ಬಿಯಲ್ ಬಾಟಲಿನ ಕ್ಯಾಪ್ನ ಸುಳಿವು ಆಧರಿಸಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗೆಳೆಯರಾದ ಮಿಥುನ್ ರಾಜ್ ಹಾಗೂ ಮುತ್ತುರಾಜ್ ಎಂಬುವರ ಮೇಲಿನ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದಡಿ ಅಪ್ರೋಜ್, ರಾಕೇಶ್, ರಾಜು ಹಾಗೂ ಆದಿಲ್ ಪಾಷಾ ಎಂಬುವರನ್ನು ಬಂಧಿಸಿದ್ದಾರೆ.
ಜುಲೈ 16ರಂದು ಆರೋಪಿಗಳು ಬಿಯಲ್ ಬಾಟಲ್ನಿಂದ ಇಬ್ಬರ ಮೇಲೆ ಹಲ್ಲೆ ನಡೆಸಿದ್ದರು. ಮಾರಣಾಂತಿಕ ಹಲ್ಲೆಯಿಂದ ಇಬ್ಬರಿಗೂ ತೀವ್ರ ರಕ್ತಸ್ರಾವವಾಗಿತ್ತು. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ, ಅವರ ಹೇಳಿಕೆ ದಾಖಲಿಸಿಕೊಂಡರೂ ಆರೋಪಿಗಳ ಬಗ್ಗೆ ಸುಳಿವು ದೊರೆತಿರಲಿಲ್ಲ. ಸೆರೆಯಾದ ಸಿಸಿಟಿವಿಯಲ್ಲಿ ದೃಶ್ಯಾವಳಿ ಅಸ್ಪಷ್ಟವಾಗಿತ್ತು. ಈ ವೇಳೆ ಘಟನಾ ಸ್ಥಳದಲ್ಲಿ ಪರಿಶೀಲಿಸಿದ್ದ ಪೊಲೀಸರಿಗೆ ಬಿಯಲ್ ಬಾಟಲ್ ಕ್ಯಾಪ್ ಸಿಕ್ಕಿತ್ತು.
ಕ್ಯಾಪ್ ಮೇಲೆ ಬ್ಯಾಚ್ ನಂಬರ್ ನಮೂದಿಸಿರುವುದನ್ನು ಗಮನಿಸಿದ ಪೊಲೀಸರು ಸುತ್ತಮುತ್ತಲಿನ ಬಾರ್ಗಳಲ್ಲಿ ಶೋಧಿಸಿದ್ದಾರೆ. ಸಮೀಪದಲ್ಲೇ ಬಾರ್ವೊಂದರಲ್ಲೇ ಮದ್ಯ ಖರೀದಿಸಿರುವುದು ಹಾಗೂ ಎರಡು ಬೈಕ್ನಲ್ಲಿ ಹೋಗುತ್ತಿರುವ ಆರೋಪಿಗಳ ವಿಡಿಯೋ ತಾಳೆ ಹಾಕಿದಾಗ, ಎರಡು ಕಡೆಗಳಲ್ಲಿ ಬಂಧಿತ ಹಲ್ಲೆಕೋರರೇ ಹೋಗಿರುವುದನ್ನು ಖಚಿತಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಹಲ್ಲೆ ಪ್ರಕರಣದ ಹಿನ್ನೆಲೆ: ಪ್ರಕರಣದಲ್ಲಿ ಗಾಯಾಳುಗಳು ಹಾಗೂ ಆರೋಪಿಗಳಿಗೆ ಯಾವುದೇ ಪರಿಚಯವಿಲ್ಲ. ಅಲ್ಲದೆ ಯಾವುದೇ ದ್ವೇಷವಿರಲಿಲ್ಲ. ಚಂದ್ರಾಲೇಔಟ್ನ ಮಿಲೇನಿಯಂ ಬಾರ್ ಬಳಿ ಆಟೋದಲ್ಲಿ ಕುಳಿತು ಜೋರಾಗಿ ಸಾಂಗ್ ಹಾಕಿ ಮಾತನಾಡುತ್ತಿದ್ದರು. ಈ ವೇಳೆ ನಾಲ್ವರು ದುಷ್ಕರ್ಮಿಗಳು ಎರಡು ಬೈಕ್ನಲ್ಲಿ ಬಂದು ಏಕಾಏಕಿ ಬಿಯರ್ ಬಾಟಲ್ನಿಂದ ಹಲ್ಲೆಗೈದು ಎಸ್ಕೇಪ್ ಆಗಿದ್ದರು.