ಬೆಂಗಳೂರು: ಕಾರ್‌ಪೂಲಿಂಗ್ ನಿಷೇಧಿಸಲಾಗಿದೆ ಎನ್ನುವುದು ಸುಳ್ಳು ಸುದ್ದಿ. ಕಾರ್‌ಪೂಲಿಂಗ್ ನಿಷೇಧಿಸಿಲ್ಲ. ಮೊದಲು ಅವರು ಸರ್ಕಾರದಿಂದ ಅನುಮತಿಯನ್ನು ಪಡೆದುಕೊಳ್ಳಲಿ. ಅನುಮತಿ ತೆಗೆದುಕೊಳ್ಳದಿರುವಾಗ ನಿಷೇಧದ ಪ್ರಶ್ನೆ ಎಲ್ಲಿದೆ? ಪ್ರತಿಯೊಬ್ಬರೂ ಸರ್ಕಾರದ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕು. ವೈಟ್ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ವಾಣಿಜ್ಯೇತರ ಖಾಸಗಿ ವಾಹನಗಳನ್ನು ಕಾರ್‌ಪೂಲಿಂಗ್ ಉದ್ದೇಶಗಳಿಗಾಗಿ ಬಳಸುವುದು ಕಾನೂನು ಬಾಹಿರವಾಗಿದೆ. ಹಳದಿ ಬಣ್ಣದ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ವಾಣಿಜ್ಯ ವಾಹನಗಳನ್ನು ಸೂಕ್ತ ಮಾರ್ಗಸೂಚಿಗಳನ್ನು ಅನುಸರಿಸಿ ಕಾರ್‌ಪೂಲಿಂಗ್‌ಗೆ ಬಳಸಬಹುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಕಾರ್‌ಪೂಲಿಂಗ್ ನಿಷೇಧಿಸಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ ಸಚಿವರು ಎಕ್ಸ್ನಲ್ಲಿ ಪೋಸ್ಟ್ ಮಾಡಿ, ಸ್ಪಷ್ಟನೆ ನೀಡಿದ್ದಾರೆ. ಕಾರ್‌ಪೂಲಿಂಗ್ ನಿಷೇಧಿಸಿಲ್ಲ. ಸೂಕ್ತ ಮಾರ್ಗಸೂಚಿ ಅನುಸರಿಸಿ ಕಾರ್‌ಪೂಲಿಂಗ್ ಬಳಸಬಹುದು ಎಂದು ತಿಳಿಸಿದ್ದಾರೆ.
ಕಾರ್‌ಪೂಲಿಂಗ್ ಕುರಿತು ಸಿಎಂಗೆ ಸಂಸದ ತೇಜಸ್ವಿ ಸೂರ್ಯ ಪತ್ರ: ರಾಜ್ಯ ರಾಜಧಾನಿಯಲ್ಲಿನ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚುವುದನ್ನು ತಡೆಯಲು ಪೂರಕವಾಗಿ ಕಾರ್‌ಪೂಲಿಂಗ್ ಸೇವೆಗಳ ಮೇಲಿನ ನಿಷೇಧವನ್ನು ಮರುಪರಿಶೀಲಿಸುವಂತೆ ಹಾಗೂ ಪ್ರಸ್ತುತ ಇರುವ ಮೋಟಾರು ವಾಹನ ಕಾಯ್ದೆಯನ್ನು ಕಾಲಕ್ಕೆ ತಕ್ಕ ರೀತಿ ನವೀಕರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಂಸದ ತೇಜಸ್ವಿ ಸೂರ್ಯ ಪತ್ರ ಬರೆದಿದ್ದರು.
ಬೆಂಗಳೂರಿನಲ್ಲಿ 1990 ರಿಂದ ಈಚೆಗೆ ವಾಹನಗಳ ಸಂಖ್ಯೆಯಲ್ಲಿ ಶೇ. 6,000 ಹೆಚ್ಚಳವಾಗಿದೆ. ಇದಕ್ಕೆ ಪೂರಕವಾಗಿ ಪ್ರತಿದಿನ 1,750 ಹೊಸ ವಾಹನಗಳು ಬೆಂಗಳೂರಿನ ರಸ್ತೆಗೆ ಬರುತ್ತಿವೆ. ಪೀಕ್ ಅವರ್‌ಗಳಲ್ಲಿ ಸರಾಸರಿ ವಾಹನದ ವೇಗ ಗಂಟೆಗೆ 15 ಕಿ.ಮೀ. ಆಗಿದೆ. ಒಟ್ಟಾರೆಯಾಗಿ, ವಾಹನಗಳ ಬಳಕೆ ಪ್ರಯಾಣದಲ್ಲಿ ಕಳೆದುಹೋದ ಮಾನವ-ಗಂಟೆಗಳ ಟ್ರಾಫಿಕ್ ಜಾಮ್ ಮತ್ತು ಅದರ ಸಂಬಂಧಿತ ಮಾನಸಿಕ ಪ್ರಭಾವದಿಂದ ಬೆಂಗಳೂರಿಗೆ 1 ಬಿಲಿಯನ್ ಡಾಲರ್ ನಷ್ಟವನ್ನು ಉಂಟುಮಾಡುತ್ತದೆ. ನಗರದ ಸಾರ್ವಜನಿಕ ಸಾರಿಗೆಗೆ ಸಂಬಂಧಿಸಿದಂತೆ, ಬಿಎಂಟಿಸಿ 6,763 ಬಸ್ ರಸ್ತೆಗಿಳಿಸಿದೆ, ಆದರೆ 1.10 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಬೆಂಗಳೂರಿನ ಬೇಡಿಕೆಗಳನ್ನು ಪೂರೈಸಲು ಫ್ಲೀಟ್ ಗಾತ್ರವು ಸಾಕಾಗುವುದಿಲ್ಲ. ನಗರಕ್ಕೆ ವಿವಿಧ ಗಾತ್ರದ ಸುಮಾರು 6,000 ಹೆಚ್ಚುವರಿ ಬಸ್‌ಗಳ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಪರಿಸ್ಥಿತಿ ಹೀಗಿರುವಾಗ, ರೈಡ್ ಶೇರ್ ಮತ್ತು ಕಾರ್‌ಪೂಲಿಂಗ್‌ಗಳು ಸಂಚಾರ ದಟ್ಟಣೆಯ ಬಿಕ್ಕಟ್ಟನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಲು ತಕ್ಷಣದ ಮತ್ತು ಸೂಕ್ತವಾದ ಪರಿಹಾರಗಳಾಗಿವೆ ಎಂದು ಪತ್ರದಲ್ಲಿ ತೇಜಸ್ವಿ ಸೂರ್ಯ ಉಲ್ಲೇಖಿಸಿದ್ದರು.
ಐಟಿ ಉದ್ಯೋಗಿಗಳಿಗೆ ಅದೇ ಐಟಿ ಪಾರ್ಕ್ ಅಥವಾ ಅದೇ ಪ್ರದೇಶಕ್ಕೆ ಪ್ರಯಾಣಿಸುವ ಮತ್ತು ಕೆಲಸ ಮುಗಿಸಿದ ನಂತರ ಅದೇ ಪ್ರದೇಶಕ್ಕೆ ಮನೆಗೆ ಹಿಂದಿರುಗುವವರಿಗೆ ಕಾರ್‌ಪೂಲಿಂಗ್ ಸೂಕ್ತವಾಗಿದೆ. ಇದಕ್ಕಾಗಿಯೇ ಹಲವು ಅಪ್ಲಿಕೇಶನ್‌ಗಳು ಈ ಕಾರ್‌ಪೂಲಿಂಗ್ ಸೇವೆಗಳನ್ನು ನಡೆಸುತ್ತಿವೆ, ಅಲ್ಲಿ 3-4 ವ್ಯಕ್ತಿಗಳು ಒಂದೇ ಕೆಲಸದ ಸ್ಥಳ, ಪ್ರದೇಶ ಅಥವಾ ಐಟಿ ಪಾರ್ಕ್‌ಗೆ ಒಟ್ಟಿಗೆ ಕಾರ್‌ಪೂಲ್ ಮಾಡುತ್ತಾರೆ. ಆದರೆ, ಸಾರಿಗೆ ಇಲಾಖೆಯ ನಿಯಮಗಳನ್ನು ಮುಂದಿಟ್ಟುಕೊಂಡು ಇಂತಹ ಕಾರ್‌ಪೂಲಿಂಗ್ ಸೇವೆಗಳನ್ನು ನಿಷೇಧಿಸಿರುವುದು ನಗರದ ಸಂಚಾರ ದಟ್ಟಣೆ ಹಿತಾಸಕ್ತಿಗೆ ಧಕ್ಕೆ ತರುತ್ತಿದ್ದು, ಸಂಚಾರ ದಟ್ಟಣೆ ಇನ್ನಷ್ಟು ಹದಗೆಡಲಿದೆ ಎಂದು ಸಂಸದರು ಹೇಳಿದ್ದರು.
ಕಾರ್‌ಪೂಲಿಂಗ್ ನಿಷೇಧದಿಂದ ಇನ್ನಷ್ಟು ವಾಹನಗಳು ರಸ್ತೆಗಿಳಿಯಲಿವೆ. ಆ ಕಾರ್‌ಪೂಲಿಂಗ್ ಮಾಡುವ ವ್ಯಕ್ತಿಗಳಲ್ಲಿ ಪ್ರತಿಯೊಬ್ಬರೂ ಕಿಕ್ಕಿರಿದ ಬಸ್ ಸೇವೆ, ಕ್ಯಾಬ್‌ಗಳು, ಆಟೋಗಳು ಅಥವಾ ಅಪೂರ್ಣ ಮೆಟ್ರೋ ನೆಟ್‌ವರ್ಕ್ ಅನ್ನು ಬಳಸುವ ಬದಲು ಕಚೇರಿ ಮತ್ತು ಮನೆಗೆ ತಮ್ಮ ಸ್ವಂತ ವಾಹನದೊಂದಿಗೆ ಪ್ರಯಾಣಿಸಲು ಆಯ್ಕೆ ಮಾಡುತ್ತಾರೆ ಇದರಿಂದ ವಾಹನ ದಟ್ಟಣೆ ಮತ್ತಷ್ಟು ಹೆಚ್ಚಲಿದೆ ಎಂದು ತಿಳಿಸಿದ್ದರು.
ಖಾಸಗಿ ವಾಹನಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ ಎಂಬುದು ಕರ್ನಾಟಕ ಸರ್ಕಾರದ ವಾದವಾಗಿದ್ದರೂ ಬದಲಾದ ಕಾಲಕ್ಕೆ ತಕ್ಕಂತೆ ಕಾನೂನಿಗೆ ತಿದ್ದುಪಡಿ ತರುವ ಅಗತ್ಯವಿದೆ ಎನ್ನುವುದನ್ನು ನೆನಪಿಡಬೇಕು. ಖಾಸಗಿ ಅಥವಾ ಗುತ್ತಿಗೆ ವಾಹನಗಳಲ್ಲಿ ವ್ಯಕ್ತಿಗಳ ಸಾಗಣೆಗೆ ಸಂಬಂಧಿಸಿದಂತೆ, ಕರ್ನಾಟಕ ಮೋಟಾರು ವಾಹನಗಳ ನಿಯಮಗಳು - 1989, ಹಳೆಯದಾಗಿದೆ ಮತ್ತು ಇಂದಿನ ಅಗತ್ಯಗಳನ್ನು ಪೂರೈಸಲು ಸಾಕಾಗುವುದಿಲ್ಲ ಹಾಗಾಗಿ ತಾತ್ಕಾಲಿಕವಾಗಿ ಕಾರ್‌ಪೂಲಿಂಗ್ ಸೇವೆಗಳ ಮೇಲಿನ ನಿಷೇಧವನ್ನು ಮರುಪರಿಶೀಲಿಸುವಂತೆ ವಿನಂತಿಸುತ್ತೇನೆ. ಹಾಗೆಯೇ ಹಳೆಯದಾಗಿರುವ ಕರ್ನಾಟಕ ಮೋಟಾರು ವಾಹನಗಳ ನಿಯಮಗಳನ್ನು ತಿದ್ದುಪಡಿ ಮಾಡಲು ಅಥವಾ ನವೀಕರಿಸಬೇಕು. ಇದರಿಂದ ಬೆಂಗಳೂರಿನ ಟ್ರಾಫಿಕ್ ಪರಿಸ್ಥಿತಿಯು ಬಹಳ ಸುಧಾರಿಸುತ್ತದೆ ಎಂದು ಪತ್ರದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಂಸದ ತೇಜಸ್ವಿ ಸೂರ್ಯ ಮನವಿ ಮಾಡಿದ್ದರು.
ಇದನ್ನೂ ಓದಿ: ರೀ ಬೋರ್, ರೀ ಬಾಡಿ ಬಿಲ್ಡ್: ಲಕ ಲಕ ಹೊಳೆಯುತ್ತಿವೆ ಗುಜರಿ ಸೇರಬೇಕಿದ್ದ ಕೆಎಸ್ಆರ್ಟಿಸಿ ಬಸ್ಗಳು!