ಬೆಂಗಳೂರು: ಮಾಲೀಕನ ಗಮನಕ್ಕೆ ಬಾರದೆ ಕಾರಿನ ಕೀ ಅನ್ನು ನಕಲು ಮಾಡಿಸಿಕೊಂಡು ಪರಿಚಯಸ್ಥನೇ ಕಾರು ಕಳ್ಳತನ ಮಾಡಿರುವ ಪ್ರಕರಣವೊಂದು ಜಿಪಿಎಸ್ ನೀಡಿದ ಸುಳಿವಿನಿಂದ ಬೆಳಕಿಗೆ ಬಂದಿದ್ದು, ಪ್ರಕರಣ ಸಿಸಿಬಿಗೆ ಹಸ್ತಾಂತರವಾಗಿದೆ.
ಕಳೆದ 2020 ರಲ್ಲಿ ಗಾಯತ್ರಿನಗರ ನಿವಾಸಿ ರೋಷನ್ ಎಚ್ಡಿಎಫ್ ಎಸಿ ಬ್ಯಾಂಕ್ನಿಂದ ಸಾಲ ಪಡೆದು 7.75 ಲಕ್ಷ ರೂ. ಬೆಲೆಯ ಕಾರು ಖರೀದಿಸಿದ್ದರು. ಕಳೆದ ಮೇ 9 ರಂದು ಸ್ನೇಹಿತನ ಜೊತೆ ವೈಯಾಲಿಕಾವಲ್ ಬಳಿಯಿರುವ ಹೋಟೆಲ್ಗೆ ತಿಂಡಿ ತಿನ್ನಲು ಹೋಗಿದ್ದರು. ತಿಂಡಿ ಸೇವಿಸಿ ಬರುವಷ್ಟರಲ್ಲಿ ಕಾರು ಕಳ್ಳತನವಾಗಿತ್ತು. ಮಾರನೇ ದಿನ ಕಾರಿನಲ್ಲಿ ಅಳವಡಿಸಿದ್ದ ಜಿಪಿಎಸ್ನಲ್ಲಿ ಪರಿಶೀಲಿಸಿದಾಗ ವೇಲೂರಿನ ಚೆನ್ನೈನ ಪೊಲೀಸ್ ಕ್ವಾರ್ಟಸ್ನಲ್ಲಿ ಕಾರಿರುವುದು ಗೊತ್ತಾಗಿದೆ.
ಬಳಿಕ ಜೂ.18 ರಂದು ಕಾರು ಬೆಂಗಳೂರಿನ ಸಂಜಯ್ ನಗರದ ಅಬಕಾರಿ ಲೇಔಟ್ಗೆ ಹೋಗಿರುವುದು ಲೊಕೇಷನ್ನಲ್ಲಿ ತಿಳಿದು ಬಂದಿದೆ. ಅಲ್ಲಿಗೆ ಹೋಗಿ ಪರಿಶೀಲಿಸಿದಾಗ ಪರಿಚಿತನಾಗಿದ್ದ ಶ್ರೀನಿವಾಸ್ ಎಂಬಾತನೇ ಕಾರು ಕಳ್ಳತನ ಮಾಡಿರುವುದು ಗೊತ್ತಾಗಿದೆ. ಕಾರಿನ ಮಾಲೀಕ ತಮ್ಮ ಬೆನ್ನಟ್ಟಿರುವುದನ್ನು ತಿಳಿದು ಎಚ್ಚೆತ್ತ ಶ್ರೀನಿವಾಸ್ ಕೂಡಲೇ ಕಾರಿನಲ್ಲಿದ್ದ ಜಿಪಿಎಸ್ ಕಿತ್ತೆಸೆದು ಪರಾರಿಯಾಗಿದ್ದಾನೆ.
ರೋಷನ್ ಅವರು ಫೋಟೋ ಸ್ಟುಡಿಯೋ ಮಾಲೀಕರಾಗಿದ್ದು, ಇವರ ಶಾಪ್ಗೆ ಬಂದಿದ್ದ ಪರಿಚಯಸ್ಥ ಶ್ರೀನಿವಾಸ್ ಯಾರಿಗೂ ತಿಳಿಯದಂತೆ ಕಾರಿನ ಕೀ ಅನ್ನು ನಕಲು ಮಾಡಿಸಿಕೊಂಡು ಬಂದಿದ್ದ. ಈ ಸಂಬಂಧ ರೋಷನ್ ಅವರು ಶ್ರೀನಿವಾಸ್ ವಿರುದ್ಧ ವೈಯಾಲಿಕಾವಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸದ್ಯ ಪ್ರಕರಣವನ್ನು ಪೊಲೀಸರು ಸಿಸಿಬಿಗೆ ಹಸ್ತಾಂತರ ಮಾಡಿದ್ದು, ಖದೀಮನ ಪತ್ತೆಗೆ ಸಿಸಿಬಿ ಬಲೆ ಬೀಸಿದೆ.