ಆನೇಕಲ್(ಬೆಂಗಳೂರು): ಕಾಶ್ಮೀರದ ರಜೌರಿಯಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಕ್ಯಾಪ್ಟನ್ ಎಂ ವಿ ಪ್ರಾಂಜಲ್ ಅವರ ಪಾರ್ಥಿವ ಶರೀರ ಇಂದು ರಾತ್ರಿ ಬೆಂಗಳೂರಿಗೆ ಆಗಮಿಸಲಿದೆ. ಇಂದು ರಾತ್ರಿ 7.30ಕ್ಕೆ ಜಮ್ಮುವಿನಿಂದ ಹೊರಡುವ ವಿಮಾನ ನಾಗ್ಪುರದಲ್ಲಿ ರೆಫ್ಯೂಲಿಂಗ್ ಮಾಡಿಸಿಕೊಂಡು, ಅಲ್ಲಿಂದ ಬೆಂಗಳೂರಿನ ಯಲಹಂಕಕ್ಕೆ ರಾತ್ರಿ 8.30ಕ್ಕೆ ತಲುಪಲಿದೆ. ಅನಂತರ ರಾತ್ರಿ 9.30ಕ್ಕೆ ಪ್ರಾಂಜಲ್ ಅವರ ಪಾರ್ಥಿವ ಶರೀರವನ್ನು ಬನ್ನೇರುಘಟ್ಟದಲ್ಲಿರುವ ನಂದನವನ ಬಡಾವಣೆಯ ನಿವಾಸಕ್ಕೆ ಕೊಂಡೊಯ್ಯಲಾಗುತ್ತದೆ.
ಶನಿವಾರ ಬೆಳಗ್ಗೆ 7 ರಿಂದ 10 ಗಂಟೆ ವರೆಗೆ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ. ಅಂತಿಮ ದರ್ಶನಕ್ಕಾಗಿ ತಾಲೂಕು ಆಡಳಿತ ವ್ಯವಸ್ಥೆ ಮಾಡಿದೆ. ಜಿಗಣಿ ಪೊಲೀಸರು ಬಂದೋಬಸ್ತ್ ವ್ಯವಸ್ಥೆ ಮಾಡಲಿದ್ದಾರೆ. ಸೇನೆಯ ಪರವಾಗಿ ಕಮಾಂಡೋ ಹೆಚ್ ಪ್ರೀತಮ್ ಸಿಂಗ್ ಇಲ್ಲಿನ ಪೂರ್ವಭಾವಿ ಸೇನಾ ಶಿಷ್ಟಾಚಾರದ ವ್ಯವಸ್ಥೆ ನೋಡಿಕೊಳ್ಳುತ್ತಿದ್ದಾರೆ.
ಬೆಳಗ್ಗೆ 10.15ಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಯೋಧನ ಅಂತಿಮ ದರ್ಶನ ಪಡೆಯಲಿದ್ದಾರೆ. 11.30ರವರೆಗೆ ಮನೆಯ ಬಳಿ ಎಲ್ಲ ವಿಧಿ ವಿಧಾನಗಳು ಮುಗಿದ ಬಳಿಕ, ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ, ಕಲ್ಲುಬಾಳು ಕ್ರಾಸ್-ಜಿಗಣಿ ಒಟಿಐಎಸ್ ವೃತ್ತ, ಉಡಿಪಿ ಗಾರ್ಡನ್ ರಿಂಗ್ ರೋಡ್, ಕೊಪ್ಪ ಗೇಟ್ - ಬನ್ನೇರುಘಟ್ಟ ವೃತ್ತ, ವೀವರ್ಸ್ ಕಾಲೋನಿಯಲ್ಲಿ ಸಾಗಿ ನೈಸ್ ರಸ್ತೆಗೆ ತಲುಪಲಿದೆ. ಅಲ್ಲಿಂದ ಕೂಡ್ಲು ವಿದ್ಯುತ್ ಚಿತಾಗಾರಕ್ಕೆ ಪಾರ್ಥಿವ ಶರೀರವನ್ನು ತರಲಾಗುತ್ತದೆ.
ಬಳಿಕ ಪುಷ್ಪ ನಮನ ಮತ್ತು ಸೇನಾ ಗೌರವದ ನಂತರ ಅಂತಿಮ ವಿಧಿ ವಿಧಾನಗಳು ನಡೆಯಲಿವೆ. ಈ ವೇಳೆ ರಾಜ್ಯ ಸರ್ಕಾರದ ವತಿಯಿಂದ ಜಿಲ್ಲಾಧಿಕಾರಿ, ತಹಶೀಲ್ದಾರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ಪೊಲೀಸ್ ಇಲಾಖೆಯಿಂದ ಗಾರ್ಡ್ ಆಫ್ ಹಾನರ್ ಸಲ್ಲಿಸುವ ಮೂಲಕ ಹುತಾತ್ಮ ಯೋಧನಿಗೆ ಗೌರವ ಸಲ್ಲಿಸಲಾಗುತ್ತದೆ.
ಆನೇಕಲ್ ತಾಲೂಕು ಆಡಳಿತ ಹಾಗೂ ಜಿಗಣಿ ಪೊಲೀಸರು ಹುತಾತ್ಮ ಯೋಧನ ನಿವಾಸದ ಬಳಿ ಸಕಲ ಸಿದ್ಧತೆ ಮಾಡುತ್ತಿದ್ದಾರೆ. ಕಲ್ಲುಬಾಳು ಪಂಚಾಯಿತಿ ಸಿಬ್ಬಂದಿ ಯೋಧನಿಗೆ ಶ್ರದ್ಧಾಂಜಲಿ ಅರ್ಪಿಸಲು ಪ್ರಮುಖ ವೃತ್ತಗಳಲ್ಲಿ ಯೋಧನ ಕಟೌಟ್ಗಳನ್ನು ನಿಲ್ಲಿಸಿದ್ದಾರೆ. ಹುತಾತ್ಮ ಯೋಧ ಪ್ರಾಂಜಲ್ ತಂದೆ ವೆಂಕಟೇಶ್ ಮಾತನಾಡಿ, "ಜಮ್ಮುವಿನಿಂದ ವಿಮಾನ ಟೇಕ್ಆಫ್ ಆಗಿ, ನಾಗ್ಪುರದಲ್ಲಿ ರೆಫ್ಯೂಲಿಂಗ್ ಮಾಡಿಕೊಂಡು ಅಲ್ಲಿಂದ ನೇರವಾಗಿ ವಿಮಾನ ಬೆಂಗಳೂರಿಗೆ ಬರಲಿದೆ. ಗೌರವದಿಂದ, ಪ್ರೀತಿಯಿಂದ ಪ್ರಾಂಜಲ್ ಅವರ ಪಾರ್ಥಿವ ಶರೀರವನ್ನು ಮನೆಗೆ ತರಲಾಗುತ್ತದೆ. ಪ್ರಾಂಜಲ್ ರಾಜ್ಯ ಮತ್ತು ದೇಶಕ್ಕೆ ಮಾದರಿಯಾಗಿದ್ದಾರೆ. ಪ್ರಾಂಜಲ್ ಅವರಿಗೆ ಜೀವ ಇಲ್ಲದೇ ಇರಬಹುದು, ಅವರ ಆತ್ಮ ಮತ್ತು ವ್ಯಕ್ತಿತ್ವ ನಮ್ಮೊಂದಿಗೆ ಸದಾ ಇರುತ್ತದೆ" ಎಂದು ಭಾವುಕರಾದರು.
ಇದನ್ನೂ ಓದಿ: ಜಮ್ಮು: ಐವರು ಹುತಾತ್ಮ ಸೇನಾನಿಗಳಿಗೆ ಭಾವಪೂರ್ಣ ಗೌರವ- ವಿಡಿಯೋ