ಬೆಂಗಳೂರು : ರಾಜ್ಯದಲ್ಲಿ ಚುನಾವಣೆ ರಣಕಣದ ಕಾವು ತಾರಕಕ್ಕೇರಿದೆ. ಬಿರು ಬಿಸಿಲನ್ನೂ ಲೆಕ್ಕಿಸದೇ ಎಲ್ಲಾ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಮೇ 10ರಂದು ಜನರ ಮತ ಸೆಳೆಯಲು ನಾನಾ ಕಸರತ್ತು ಆರಂಭಿಸಿವೆ. ರಾಜ್ಯದಲ್ಲಿ ಬಹುತೇಕ ಕಡೆ ತ್ರಿಕೋನೀಯ ಸ್ಪರ್ಧೆ ಇದ್ದರೆ, ಇನ್ನೊಂದಷ್ಟು ಕಡೆ ಎರಡು ಪಕ್ಷಗಳ ನಡುವೆ ಜಿದ್ದಾಜಿದ್ದು ಇದೆ. ಆದರೆ ಕೆಲ ಕ್ಷೇತ್ರಗಳಲ್ಲಿನ ಪ್ರಬಲ ಅಭ್ಯರ್ಥಿಗಳಿಗೆ ಪಿಕಲಾಟ ಶುರುವಾಗಿದೆ. ಪ್ರಬಲ ಅಭ್ಯರ್ಥಿಗಳಿಗೆ ತಮಗೆ ಪ್ರಬಲ ಪೈಪೋಟಿ ನೀಡುವ ಎದುರಾಳಿ ಅಭ್ಯರ್ಥಿಗಳ ಜೊತೆಗೆ ಕಣದಲ್ಲಿರುವ ವೀಕ್ ಕ್ಯಾಂಡಿಡೇಟ್ ನಿಂದಲೂ ಟೆನ್ಷನ್ ಶುರುವಾಗಿದೆ.
ಹೌದು, ಏಕ ನಾಮ ಹಲವು ಅಭ್ಯರ್ಥಿ ಟೆನ್ಷನ್ ಈ ಬಾರಿ ಹಲವು ಅಭ್ಯರ್ಥಿಗಳ ಪೀಕಲಾಟಕ್ಕೆ ಕಾರಣವಾಗಿದೆ. ಅಂದರೆ ಒಂದೇ ಕ್ಷೇತ್ರದಲ್ಲಿ ಒಂದೇ ಹೆಸರಿರುವ ಅಭ್ಯರ್ಥಿಗಳಿಂದಾಗಿ ಕೆಲ ಪ್ರಬಲ ಅಭ್ಯರ್ಥಿಗಳು ನಿದ್ದೆಗೆಟ್ಟಿದ್ದಾರೆ. ಈ ಬಾರಿ ಕೆಲ ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳ ಹೆಸರನ್ನೇ ಹೊಂದಿರುವ ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಪ್ರತಿ ಬಾರಿ ಚುನಾವಣೆಯಲ್ಲೂ ಇಂಥ ಪ್ರಸಂಗ ಎದುರಾಗುತ್ತೆ. ಈ ಬಾರಿ ರಣಕಣದಲ್ಲಿ ಒಂದೇ ಹೆಸರಿನ ಅಭ್ಯರ್ಥಿಗಳಿರುವ ಕ್ಷೇತ್ರಗಳ ಮೇಲೆ ಒಂದು ನೋಟ ಹರಿಸೋಣ.
ಕೆಲ ಪಕ್ಷಗಳು ರಾಜಕೀಯ ತಂತ್ರಗಾರಿಕೆಯಾಗಿ ಎದುರಾಳಿ ಪ್ರಬಲ ಅಭ್ಯರ್ಥಿಯನ್ನು ಸೋಲಿಸುವ ಹಾಗೂ ಗೆಲ್ಲಿಸುವ ಲೆಕ್ಕಾಚಾರದೊಂದಿಗೆ ಅವರದೇ ಹೆಸರಿನ ಪಕ್ಷೇತರ ಅಭ್ಯರ್ಥಿಗಳನ್ನು ಅದೇ ಕ್ಷೇತ್ರದಲ್ಲಿ ಪರೋಕ್ಷ ಬೆಂಬಲದೊಂದಿಗೆ ಸ್ಪರ್ಧೆಗೆ ನಿಲ್ಲಿಸುತ್ತದೆ. ಆ ಮೂಲಕ ಮತದಾರರಲ್ಲಿ ಗೊಂದಲ ಮೂಡಿಸುವ ಉದ್ದೇಶ ಹೊಂದಿರುತ್ತೆ. ಗೊಂದಲದಲ್ಲಿ ಪ್ರಬಲ ಅಭ್ಯರ್ಥಿಗೆ ಹಾಕುವ ಮತ ಅದೇ ಹೆಸರಿನ ಮತ್ತೊಬ್ಬ ಅಭ್ಯರ್ಥಿಗೆ ಬೀಳುವ ಮೂಲಕ ಮತ ಒಡೆಯುವ ತಂತ್ರಗಾರಿಕೆ ಇದರ ಹಿಂದಿದೆ.
ಒಂದೇ ಹೆಸರಿನ ಅಭ್ಯರ್ಥಿಗಳಿರುವ ಕ್ಷೇತ್ರಗಳ್ಯಾವುವು :
ಚನ್ನಪಟ್ಟಣ ಕ್ಷೇತ್ರ : ಚನ್ನಪಟ್ಟಣ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸ್ಪರ್ಧಿಸುವ ಕ್ಷೇತ್ರ. ಬಿಜೆಪಿಯ ಸಿ.ಪಿ. ಯೋಗೇಶ್ವರ್ ಕಣದಲ್ಲಿರುವ ಪ್ರಬಲ ಎದುರಾಳಿ. ಈ ಕ್ಷೇತ್ರದಲ್ಲಿ ಒಟ್ಟು 15 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ, ಈ ಕ್ಷೇತ್ರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೆಸರಿನ ಮತ್ತೊಬ್ಬ ಪಕ್ಷೇತರ ಅಭ್ಯರ್ಥಿ ಕಣಕ್ಕಿಳಿದಿದ್ದಾರೆ. ಕುಮಾರಸ್ವಾಮಿ ವೈ.ಸಿ. ಎಂಬ ಹೆಸರಿನ ಪಕ್ಷೇತರ ಅಭ್ಯರ್ಥಿ ಹೆಚ್ಡಿಕೆ ಎದುರಾಳಿಯಾಗಿ ನಿಂತಿದ್ದಾರೆ.
ಶ್ರೀನಿವಾಸಪುರ ಕ್ಷೇತ್ರ : ಶ್ರೀನಿವಾಸಪುರ ಕ್ಷೇತ್ರದ ಹಾಲಿ ಶಾಸಕ ಹಾಗೂ ಈಗಿನ ಕಾಂಗ್ರೆಸ್ ಅಭ್ಯರ್ಥಿ ಕೆ.ಆರ್. ರಮೇಶ್ ಕುಮಾರ್ ಕಾಂಗ್ರೆಸ್ ನ ಪ್ರಬಲ ಅಭ್ಯರ್ಥಿ. ಇವರ ಮುಂದೆ ಜೆಡಿಎಸ್ ನಿಂದ ಜಿ.ಕೆ. ವೆಂಕಟಶಿವರೆಡ್ಡಿ, ಬಿಜೆಪಿಯಿಂದ ಗುಂಜೂರು ಆರ್.ಶ್ರೀನಿವಾಸ ರೆಡ್ಡಿ ಸ್ಪರ್ಧಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಣದಲ್ಲಿ ರಮೇಶ್ ಕುಮಾರ್ ಹೆಸರಿನ ಇಬ್ಬರು ಪಕ್ಷೇತರ ಅಭ್ಯರ್ಥಿಗಳಾದ ಎನ್.ಆರ್. ರಮೇಶ್ ಕುಮಾರ್, ಎಸ್. ರಮೇಶ್ ಕುಮಾರ್ ಸ್ಪರ್ಧಿಸುತ್ತಿದ್ದಾರೆ. ಇತ್ತ ಜೆಡಿಎಸ್ ಪ್ರಬಲ ಅಭ್ಯರ್ಥಿ ಜಿ.ಕೆ. ವೆಂಕಟಶಿವರೆಡ್ಡಿ ಹೆಸರಲ್ಲಿ ಕಣದಲ್ಲಿ ವೆಂಕಟಶಿವರೆಡ್ಡಿ ಹಾಗೂ ಟಿ.ಎನ್. ವೆಂಕಟಶಿವರೆಡ್ಡಿ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
ಬಂಗಾರಪೇಟೆ ಕ್ಷೇತ್ರ : ಬಂಗಾರಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಲಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಪ್ರಬಲ ಕೈ ಅಭ್ಯರ್ಥಿ. ಬಿಜೆಪಿಯಿಂದ ಎಂ.ನಾರಾಯಣಸ್ವಾಮಿ, ಜೆಡಿಎಸ್ ಅಭ್ಯರ್ಥಿ ಎಂ.ಮಲ್ಲೇಶ್ ಬಾಬು ಕಣದಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 8 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಅಚ್ಚರಿ ಎಂದರೆ ಈ ಕ್ಷೇತ್ರದಲ್ಲಿ ಒಟ್ಟು 4 ಅಭ್ಯರ್ಥಿಗಳ ಹೆಸರು ನಾರಾಯಣಸ್ವಾಮಿಯೇ ಆಗಿದೆ. ಬಿಎಸ್ ಪಿ ಅಭ್ಯರ್ಥಿ ಕೆ.ಎನ್. ನಾರಾಯಣಸ್ವಾಮಿ, ಪಕ್ಷೇತರ ಅಭ್ಯರ್ಥಿ ಎಸ್. ಎನ್. ನಾರಾಯಣ ಸ್ವಾಮಿ ವಿ ಕಣದಲ್ಲಿದ್ದಾರೆ.
ಯಲಹಂಕ ಕ್ಷೇತ್ರ : ಯಲಹಂಕ ಕ್ಷೇತ್ರದಲ್ಲಿ ಒಟ್ಟು 20 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎಸ್.ಆರ್. ವಿಶ್ವನಾಥ್ ಬಿಜೆಪಿಯ ಹಾಲಿ ಶಾಸಕ ಹಾಗೂ ಈ ಬಾರಿಯ ಪ್ರಬಲ ಅಭ್ಯರ್ಥಿ. ಜೆಡಿಎಸ್ ನಿಂದ ಮುನೇಗೌಡ ಎಂ. ಕಣಕ್ಕಿಳಿದಿದ್ದಾರೆ. ಆದರೆ, ಕಣದಲ್ಲಿ ವಿಶ್ವನಾಥ್ ಹೆಸರಿನ ಇಬ್ಬರು ಪಕ್ಷೇತರರು ಇದ್ದಾರೆ. ಪಕ್ಷೇತರ ಎಸ್.ವಿ. ವಿಶ್ವನಾಥ್, ವಿಶ್ವನಾಥ್ ಹೆಚ್.ಜೆ. ಕಣದಲ್ಲಿದ್ದಾರೆ. ಇನ್ನು ಜೆಡಿಎಸ್ ಅಭ್ಯರ್ಥಿ ಮುನೇಗೌಡ ಎಂ ಹೆಸರಿನ ಮೂವರು ಪಕ್ಷೇತರ ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ಮುನೇಗೌಡ ಎನ್, ಬಿ.ಎಂ. ಮುನೇಗೌಡ, ಮುನೇಗೌಡ ವಿ. ಎಂಬುವರು ರಣಕಣಕ್ಕೆ ಧುಮುಕಿದ್ದಾರೆ.
ದಾಸರಹಳ್ಳಿ ಕ್ಷೇತ್ರ : ದಾಸರಹಳ್ಳಿ ಕ್ಷೇತ್ರದಲ್ಲಿ ಒಟ್ಟು 15 ಅಭ್ಯರ್ಥಿಗಳು ಇದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ಶಾಸಕ ಆರ್. ಮಂಜುನಾಥ್ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಬಿಜೆಪಿ ಮಾಜಿ ಶಾಸಕ ಎಸ್. ಮುನಿರಾಜು ಪ್ರಬಲ ಅಭ್ಯರ್ಥಿಯಾಗಿದ್ದಾರೆ. ಜಿ. ಧನಂಜಯ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ಹೆಸರಿನ ಮೂವರು ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎನ್. ಮಂಜುನಾಥ್, ಮಂಜುನಾಥ್.ಆರ್, ಆರ್.ಮಂಜುನಾಥ್ ಹೆಸರಿನ ಮೂವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಗುಬ್ಬಿ ಕ್ಷೇತ್ರ : ಗುಬ್ಬಿ ಕ್ಷೇತ್ರದಲ್ಲಿ ಒಟ್ಟು 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕ್ಷೇತ್ರದ ಪ್ರಬಲ ಕಾಂಗ್ರೆಸ್ ಅಭ್ಯರ್ಥಿ ಎಸ್.ಆರ್. ಶ್ರೀನಿವಾಸ್ (ವಾಸು). ಬಿಜೆಪಿ ಅಭ್ಯರ್ಥಿ ಎಸ್.ಡಿ. ದಿಲೀಪ್ ಕುಮಾರ್, ಜೆಡಿಎಸ್ ಅಭ್ಯರ್ಥಿ ನಾಗರಾಜು ಬಿ.ಎಸ್. ಕಾಂಗ್ರೆಸ್ ಅಭ್ಯರ್ಥಿ ಹೆಸರಿನ ಶ್ರೀನಿವಾಸ್ ಟಿ.ವಿ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದಾರೆ.
ಕಡೂರು ಕ್ಷೇತ್ರ : ಕಡೂರು ಕ್ಷೇತ್ರದಲ್ಲಿ ಒಟ್ಟು 10 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಹಾಲಿ ಶಾಸಕ ಬೆಳ್ಳಿ ಪ್ರಕಾಶ್ ಪ್ರಬಲ ಅಭ್ಯರ್ಥಿ. ವೈಎಸ್ ವಿ.ದತ್ತಾ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಆನಂದ್ ಕೆ.ಎಸ್. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಆದರೆ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಹೆಸರಿನ ಇಬ್ಬರು ನೋಂದಾಯಿತ ಪಕ್ಷಗಳಿಂದ ಆನಂದ್ ಕೆ.ಟಿ, ಆನಂದ್ ನಾಯಕ್ ಎಂಬುವವರು ಸ್ಪರ್ಧಿಸುತ್ತಿದ್ದಾರೆ.
ಚಿಕ್ಕಬಳ್ಳಾಪುರ ಕ್ಷೇತ್ರ : ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 12 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಸಚಿವ ಹಾಗೂ ಶಾಸಕ ಡಾ.ಕೆ.ಸುಧಾಕರ್ ಕ್ಷೇತ್ರದ ಪ್ರಬಲ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ ಹಾಗೂ ಜೆಡಿಎಸ್ ನ ಕೆ.ಪಿ. ಬಚ್ಚೇಗೌಡ ಕಣದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿ ಸುಧಾಕರ್ ಹೆಸರಿನ ಪಕ್ಷೇತರ ಅಭ್ಯರ್ಥಿ ಸುಧಾಕರ್.ಎನ್ ಕಣದಲ್ಲಿದ್ದಾರೆ.
ಚಿಂತಾಮಣಿ ಕ್ಷೇತ್ರ : ಚಿಂತಾಮಣಿ ಕ್ಷೇತ್ರದಲ್ಲಿ ಒಟ್ಟು 11 ಅಭ್ಯರ್ಥಿಗಳು ಇದ್ದಾರೆ. ಜೆಡಿಎಸ್ ನ ಜೆ.ಕೆ. ಕೃಷ್ಣಾ ರೆಡ್ಡಿ ಹಾಲಿ ಶಾಸಕ. ಈ ಬಾರಿನೂ ಅವರು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಬಿಜೆಪಿಯ ಜಿ.ಎನ್. ವೇಣುಗೋಪಾಲ್, ಕಾಂಗ್ರೆಸ್ ನ ಎಂ.ಸಿ. ಸುಧಾಕರ್ ಕಣದಲ್ಲಿದ್ದಾರೆ. ಜೆಡಿಎಸ್ ಅಭ್ಯರ್ಥಿ ಕೃಷ್ಣಾರೆಡ್ಡಿ ಅವರ ಹೆಸರಿನ ಮೂವರು ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪಕ್ಷೇತರ ಕೃಷ್ಣಾ ರೆಡ್ಡಿ.ಕೆ, ಎನ್.ಸಿ.ಕೃಷ್ಣಾರೆಡ್ಡಿ ಕಣಕ್ಕಿಳಿದಿದ್ದಾರೆ.
ರಾಜಾಜಿನಗರ ಕ್ಷೇತ್ರ : ಕ್ಷೇತ್ರದಲ್ಲಿ ಒಟ್ಟು 18 ಅಭ್ಯರ್ಥಿಗಳು ಇದ್ದಾರೆ. ಪ್ರಬಲ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಹೆಸರಿನ ಪಕ್ಷೇತರ ಅಭ್ಯರ್ಥಿ ಪುಟ್ಟಣ್ಣ ಕಣದಲ್ಲಿದ್ದಾರೆ.
ವಿಜಯನಗರ ಕ್ಷೇತ್ರ : ವಿಜಯನಗರದಲ್ಲಿ ಒಟ್ಟು 15 ಅಭ್ಯರ್ಥಿಗಳು ಇದ್ದಾರೆ. ಹಾಲಿ ಶಾಸಕ ಎಂ. ಕೃಷ್ಣಪ್ಪ ಕೈ ಅಭ್ಯರ್ಥಿ. ಪ್ರಬಲ ಅಭ್ಯರ್ಥಿ ಎಂ.ಕೃಷ್ಣಪ್ಪ ಹೆಸರಿನ ಪಕ್ಷೇತರ ಅಭ್ಯರ್ಥಿ ಕಣದಲ್ಲಿದ್ದಾರೆ. ಇನ್ನು ಬಿಜೆಪಿ ಅಭ್ಯರ್ಥಿ ಹೆಚ್. ರವೀಂದ್ರ ಹೆಸರಿನ ಇಬ್ಬರು ಪಕ್ಷೇತರರಾದ ರವೀಂದ್ರ ಎ.ಎಂ ಮತ್ತು ರವೀಂದ್ರ ಎಂಬವರು ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಜಯನಗರ ಕ್ಷೇತ್ರ : ಜಯನಗರ ಕ್ಷೇತ್ರದಲ್ಲಿ ಒಟ್ಟು 15 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹಾಲಿ ಶಾಸಕಿ ಸೌಮ್ಯ ರೆಡ್ಡಿ ಕೈ ಅಭ್ಯರ್ಥಿ. ಅವರ ಹೆಸರಿನಲ್ಲೇ ಪಕ್ಷೇತರ ಅಭ್ಯರ್ಥಿ ಕಣದಲ್ಲಿದ್ದಾರೆ. ಬಿಜೆಪಿ ಪ್ರಬಲ ಅಭ್ಯರ್ಥಿ ಸಿ.ಕೆ. ರಾಮಮೂರ್ತಿ ಹೆಸರಿನ ಪಕ್ಷೇತರ ಬಿ.ರಾಮಮೂರ್ತಿ ಎಂಬವರು ಕಣದಲ್ಲಿದ್ದಾರೆ.
ಬೊಮ್ಮನಹಳ್ಳಿ ಕ್ಷೇತ್ರ : ಬೊಮ್ಮನಹಳ್ಳಿ ಕ್ಷೇತ್ರದಲ್ಲಿ 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿಯ ಹಾಲಿ ಶಾಸಕ ಸತೀಶ್ ರೆಡ್ಡಿ ಕ್ಷೇತ್ರದ ಪ್ರಬಲ ಅಭ್ಯರ್ಥಿ. ಕಾಂಗ್ರೆಸ್ ಪ್ರಬಲ ಅಭ್ಯರ್ಥಿ ಉಮಾಪತಿ ಎಸ್. ಗೌಡ. ಬಿಜೆಪಿಯ ಸತೀಶ್ ರೆಡ್ಡಿ ಹೆಸರಿನ ಇಬ್ಬರು ಪಕ್ಷೇತರರು ಕಣದಲ್ಲಿ ಸ್ಪರ್ಧಿಸುತ್ತಿದ್ದಾರೆ. ಇನ್ನು ಕಾಂಗ್ರೆಸ್‌ನ ಉಮಾಪತಿ ಗೌಡ ಹೆಸರಿನ ಉಮಾಪತಿ ಬಾಬು ಬಿಎಸ್ ಪಿಯಿಂದ ಸ್ಪರ್ಧಿಸುತ್ತಿದ್ದಾರೆ.
ಹೊಸಕೋಟೆ ಕ್ಷೇತ್ರ : ಹೈ ಪ್ರೊಫೈಲ್ ಹೊಸಕೋಟೆ ಕ್ಷೇತ್ರದಲ್ಲಿ 23 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹಾಲಿ ಶಾಸಕ ಶರತ್ ಬಚ್ಚೇಗೌಡ ಕಾಂಗ್ರೆಸ್ ನ ಪ್ರಬಲ ಅಭ್ಯರ್ಥಿ. ಆದರೆ ಅವರದ್ದೇ ಹೆಸರು ಹೊಂದಿರುವ ಮತ್ತೊಬ್ಬ ಅಭ್ಯರ್ಥಿ ಕಣದಲ್ಲಿದ್ದಾರೆ. ಅದೇ ರೀತಿ ಕ್ಷೇತ್ರದ ಸಚಿವ ಬಿಜೆಪಿ ಪ್ರಬಲ ಅಭ್ಯರ್ಥಿ ಎಂ.ಟಿ.ಬಿ. ನಾಗರಾಜ್ ಹೆಸರಿನ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎನ್.ನಾಗರಾಜ (ಎನ್.ಟಿ.ಬಿ), ಟಿ.ನಾಗರಾಜ್ (ಜೆಸಿಬಿ) ಪಕ್ಷೇತರ ಸ್ಪರ್ಧಿಗಳಾಗಿದ್ದಾರೆ.
ಮಾಗಡಿ ಕ್ಷೇತ್ರ : ಮಾಗಡಿ ಕ್ಷೇತ್ರದಲ್ಲಿ ಹಾಲಿ ಜೆಡಿಎಸ್ ಶಾಸಕ ಎ.ಮಂಜುನಾಥ್ ಪ್ರಬಲ ಅಭ್ಯರ್ಥಿ. ಆದರೆ ಅವರದ್ದೇ ಹೆಸರು ಹೊಂದಿರುವ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅದೇ ರೀತಿ ಕಾಂಗ್ರೆಸ್ ಪ್ರಬಲ ಅಭ್ಯರ್ಥಿ ಹೆಚ್.ಸಿ. ಬಾಲಕೃಷ್ಣ ಹೆಸರಿನ ಪಕ್ಷೇತರರೊಬ್ಬರು ಕಣದಲ್ಲಿದ್ದಾರೆ.
ಮಳವಳ್ಳಿ ಕ್ಷೇತ್ರ : ಮಳವಳ್ಳಿ ಕ್ಷೇತ್ರದಲ್ಲಿ 14 ಅಭ್ಯರ್ಥಿಗಳು ಇದ್ದಾರೆ. ಜೆಡಿಎಸ್ ಹಾಲಿ ಶಾಸಕ ಡಾ.ಕೆ.ಅನ್ನದಾನಿ ಪ್ರಬಲ ಅಭ್ಯರ್ಥಿ. ಆದರೆ ಅವರ ಹೆಸರು ಹೊಂದಿರುವ ಪಕ್ಷೇತರ ಅಭ್ಯರ್ಥಿ ಅನ್ನದಾನಿ. ಸಿ. ಕಣದಲ್ಲಿದ್ದಾರೆ.
ಹಾಸನ ಕ್ಷೇತ್ರ : ಹಾಸನ ಕ್ಷೇತ್ರದಲ್ಲಿ 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜೆಡಿಎಸ್ ಪ್ರಬಲ ಅಭ್ಯರ್ಥಿ ಸ್ವರೂಪ್ ಪ್ರಕಾಶ್ ಅವರ ಹೆಸರು ಹೋಲುವ ಸ್ವರೂಪ್ ಬಿ.ಎಂ. ಎಂಬವರು ಸ್ಪರ್ಧಿಸುತ್ತಿದ್ದಾರೆ.
ಹೊಳೆನರಸೀಪುರ ಕ್ಷೇತ್ರ : ಹೊಳೆನರಸೀಪುರ ಕ್ಷೇತ್ರದಲ್ಲಿ 8 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜೆಡಿಎಸ್ ಹಾಲಿ ಶಾಸಕ ಹೆಚ್.ಡಿ. ರೇವಣ್ಣ ಪ್ರಬಲ ಅಭ್ಯರ್ಥಿ. ಆದರೆ, ಅವರದ್ದೇ ಹೆಸರಿನ ಮತ್ತೊಬ್ಬ ಪಕ್ಷೇತರ ಹೆಚ್.ಆರ್. ರೇವಣ್ಣ ಕಣಕ್ಕಿಳಿದಿದ್ದಾರೆ.
ಸಕಲೇಶಪುರ ಕ್ಷೇತ್ರ : ಸಕಲೇಶಪುರ ಕ್ಷೇತ್ರದಲ್ಲಿ 10 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಜೆಡಿಎಸ್ ನ ಹಾಲಿ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಹೆಸರು ಹೊಂದಿರುವ ಹೆಚ್.ಎಸ್. ಕುಮಾರಸ್ವಾಮಿ ಎಂಬವರು ಕರುನಾಡು ಪಕ್ಷದ ಅಭ್ಯರ್ಥಿಯಾಗಿದ್ದಾರೆ.
ಇದನ್ನೂ ಓದಿ : ದೇಶಕ್ಕೆ ಉತ್ತಮ ಕಾರ್ಯಕ್ರಮ ನೀಡಿದ್ದು ಕಾಂಗ್ರೆಸ್.. ಬಿಜೆಪಿ ನಮ್ಮ ಬಗ್ಗೆ ಅಪಪ್ರಚಾರ ಮಾಡ್ತಿದೆ: ಎಂ.ಬಿ ಪಾಟೀಲ್