ಬೆಂಗಳೂರು: ಕ್ಯಾನ್ಸರ್ ಮಹಾಮಾರಿ ರಾಜ್ಯದಲ್ಲಿ ದಟ್ಟವಾಗಿ ಆವರಿಸುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರನ್ನು ಬಲಿ ಪಡೆಯುತ್ತಿದೆ. ಅಂದಹಾಗೆ ಪುರುಷರಲ್ಲಿ ಇದು ಕಡಿಮೆ ಎಂದು ಹೇಳಲಾಗದು. ಆದರೆ ಮಹಾಮಾರಿಯ ಆವರಿಸುವಿಕೆ ದೊಡ್ಡ ಪ್ರಮಾಣದಲ್ಲಿ ಅಗುತ್ತಿರುವುದು ಅಪಾಯದ ಮುನ್ಸೂಚನೆಯಾಗಿದೆ.
2022ರಲ್ಲಿ ಒಟ್ಟು 47,806 ಮಹಿಳೆಯರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎಂಬ ಮಾಹಿತಿ ಇದೆ. ಇವರಿಗೆ ಹೋಲಿಸಿದರೆ ಪುರುಷರ ಸಂಖ್ಯೆ ಕಡಿಮೆ. ಆದರೆ ಅವರೂ ಸಹ 42,543 ಮಂದಿ ಇದ್ದಾರೆ ಎನ್ನುವುದು ಕಳವಳಕಾರಿ ಸಂಗತಿ. ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ಕಾರ್ಯಕ್ರಮದ ವರದಿಯ ಮಾಹಿತಿಯ ಪ್ರಕಾರ ಈ ಮಾಹಿತಿ ಲಭ್ಯವಾಗಿದೆ.
ಹೆಚ್ಚುತ್ತಿರುವ ಕೊಲೊರೆಕ್ಟಲ್ ಕ್ಯಾನ್ಸರ್: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರಾಸ್ಟೇಟ್, ಕೊಲೊನ್, ಲಿವರ್, ಮೆದುಳು, ನಾಲಿಗೆ, ಶ್ವಾಸಕೋಶ, ಲಿಂಫೋಮಾ, ಬಾಯಿ, ಅನ್ನನಾಳ ಮತ್ತು ಹೊಟ್ಟೆಯ ಕ್ಯಾನ್ಸರ್ ಪುರುಷರಲ್ಲಿ ಗಣನೀಯವಾಗಿ ಹೆಚ್ಚುತ್ತಿದೆ. ಸ್ತನ ಕ್ಯಾನ್ಸರ್ ಹೊರತುಪಡಿಸಿ, ಕಾರ್ಪಸ್ ಯುಟೆರಿ, ಶ್ವಾಸಕೋಶ, ಕೊಲೊನ್, ಅಂಡಾಶಯ, ಥೈರಾಯ್ಡ್ ಮತ್ತು ಹೊಟ್ಟೆಯ ಕ್ಯಾನ್ಸರ್ ನಗರದಲ್ಲಿ ಮಹಿಳೆಯರಲ್ಲಿ ಗಣನೀಯವಾಗಿ ಹೆಚ್ಚುತ್ತಿದೆ. ರಾಜ್ಯ ನಡೆಸುತ್ತಿರುವ ಕಿದ್ವಾಯಿ ಸ್ಮಾರಕ ಆಂಕೊಲಾಜಿಯ ವೈದ್ಯರ ಪ್ರಕಾರ, ಎರಡೂ ಲಿಂಗಗಳಲ್ಲಿ, ಕೊಲೊರೆಕ್ಟಲ್ ಕ್ಯಾನ್ಸರ್ ಹೆಚ್ಚುತ್ತಿದೆ.
ಕಿದ್ವಾಯಿ ಆಸ್ಪತ್ರೆ ಮೂಲಗಳ ಪ್ರಕಾರ ಕರ್ನಾಟಕದಲ್ಲಿ ವಾರ್ಷಿಕ ಸರಾಸರಿ 1% ರಷ್ಟು ಪುರುಷರು ಮತ್ತು ಮಹಿಳೆಯರಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿವೆ. ಭಾರತದ ಇತರ ಮೆಟ್ರೋಪಾಲಿಟನ್ ನಗರಗಳಲ್ಲಿ ಇದೇ ರೀತಿಯ ಪ್ರವೃತ್ತಿಯನ್ನು ಗಮನಿಸಲಾಗಿದೆ. ಹೆಚ್ಚು ಯುವತಿಯರು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂಬ ಅಂಶವು ಆತಂಕಕಾರಿ ಪ್ರವೃತ್ತಿಯಾಗಿದೆ. ಬೆಂಗಳೂರಿನಲ್ಲಿ ಬಾಯಿ ಮತ್ತು ಗರ್ಭಕಂಠದ ಕ್ಯಾನ್ಸರ್‌ಗಳು ಕಡಿಮೆಯಾಗುತ್ತಿರುವುದನ್ನು ನಾವು ನೋಡಿದ್ದೇವೆ. ಆದಾಗ್ಯೂ, ಈ ಹಿಂದೆ 40ರ ದಶಕದ ಅಂತ್ಯದಲ್ಲಿ ಕಾಣಿಸಿಕೊಂಡಿದ್ದ ಕೊಲೊರೆಕ್ಟಲ್ ಕ್ಯಾನ್ಸರ್ ಈಗ ಯುವ ಜನರಲ್ಲಿ ರೋಗನಿರ್ಣಯ ಮಾಡಲಾಗುತ್ತಿದೆ.
ಅಪಾಯಕಾರಿ ಅಂಶಗಳು: ಸ್ತನ ಕ್ಯಾನ್ಸರ್‌ಗೆ ನಿಖರವಾದ ಅಪಾಯಕಾರಿ ಅಂಶಗಳು ಇನ್ನೂ ತಿಳಿದಿಲ್ಲವಾದರೂ
- ಜಡ ಜೀವನಶೈಲಿ
- ತ್ವರಿತ ಆಹಾರ ಮತ್ತು ಗಾಳಿ ತುಂಬಿದ ಪಾನೀಯಗಳ ಅತಿಯಾದ ಸೇವನೆ
- ಮಹಿಳೆಯರಲ್ಲಿ ಧೂಮಪಾನ ಮತ್ತು ಮದ್ಯ ಸೇವನೆಯ ಹೆಚ್ಚಳ ಮತ್ತು ಋತುಚಕ್ರದ ಅಂಶಗಳು ಕಾರಣವಾಗಿದೆ.
- ಸ್ಥೂಲಕಾಯತೆ
- ಪ್ರೌಢಾವಸ್ಥೆಯಲ್ಲಿ ತೂಕ ಹೆಚ್ಚಾಗುವುದು
- ದೈಹಿಕ ವ್ಯಾಯಾಮದ ಕೊರತೆ ಮತ್ತು ಸಂತಾನೋತ್ಪತ್ತಿ ಅಂಶಗಳು
- ಹಾಗೂ ಬಾಹ್ಯ ಹಾರ್ಮೋನ್ ಅಂಶಗಳು ಸಹ ಸಾಮಾನ್ಯ ಅಪಾಯಕಾರಿ ಅಂಶಗಳಾಗಿವೆ.
2025ರ ವೇಳೆಗೆ ಶೇ.7ರಷ್ಟು ಹೆಚ್ಚಳ: ಕರ್ನಾಟಕದಲ್ಲಿ ಹೊಸ ಕ್ಯಾನ್ಸರ್ ಪ್ರಕರಣಗಳು 2025ರ ವೇಳೆಗೆ 97,130 ಪ್ರಕರಣಗಳಿಗೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರಸ್ತುತ ಅಂದರೆ 2022ರಲ್ಲಿ 90,349 ಪ್ರಕರಣಗಳಿಗೆ ಹೋಲಿಸಿದರೆ ಸುಮಾರು ಶೇ.7 ರಷ್ಟು ಹೆಚ್ಚಳವಾಗಲಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮತ್ತು ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಇನ್ಫರ್ಮ್ಯಾಟಿಕ್ಸ್ ಅಂಡ್ ರಿಸರ್ಚ್ ಸಂಸ್ಥೆಗಳು 2021ರಲ್ಲಿಯೇ ಸಂಶೋಧನೆ ನಡೆಸಿ 2025ರ ವೇಳೆಗೆ ಕರ್ನಾಟಕದಲ್ಲಿ ಹೊಸ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ.11 ರಷ್ಟು ಏರಿಕೆಯಾಗಲಿದೆ ಎಂದು ಅಂದಾಜಿಸಿದ್ದವು.
ನಿಖರ ಕಾರಣ ತಿಳಿದು ಬಂದಿಲ್ಲ: ಕ್ಯಾನ್ಸರ್‌ಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಪ್ರಮುಖವಾಗಿ ತಂಬಾಕು ಮತ್ತು ಅದರಂತಹ ಅಪಾಯಕಾರಿ ಅಂಶಗಳು ಕಾನ್ಸರ್‌ಗೆ ಕಾರಣವಾಗಿವೆ. ದೇಶದಲ್ಲಿ ಅರ್ಧದಷ್ಟು ಕ್ಯಾನ್ಸರ್‌ಗೆ ತಂಬಾಕು ಕಾರಣ ಎನ್ನುತ್ತಾರೆ ತಜ್ಞರು. ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಹಿಳೆಯರಲ್ಲಿ ಶೇ. 42.1ರಷ್ಟು ಸ್ತನ ಕ್ಯಾನ್ಸರ್. ಇದನ್ನು ಹೊರತುಪಡಿಸಿದರೆ ಶೇ.15.7ರಷ್ಟು ಮಹಿಳೆಯರು ಗರ್ಭಕೋಶ, ಶೇ.10.1ರಷ್ಟು ಅಂಡಾಶಯ, ಶೇ.5.9ರಷ್ಟು ಕಾರ್ಪಸ್ ಗರ್ಭಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿರುವುದು ವರದಿಯಾಗಿದೆ. ಪುರುಷರಲ್ಲಿ ಶ್ವಾಸಕೋಶ, ಬಾಯಿ, ಕೊಲೋನ್, ಗುದನಾಳ, ಯಕೃತ್ ಕ್ಯಾನ್ಸರ್ ಬರುತ್ತಿದೆ.
ಗುಣಪಡಿಸಲು ಸಾಧ್ಯ: ದೇಹದ ಯಾವುದೇ ಭಾಗಕ್ಕೂ ಕ್ಯಾನ್ಸರ್ ಬರಬಹುದು. ಆರಂಭದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಗುಣಪಡಿಸಬಹುದು. ಕ್ಯಾನ್ಸರ್‌ಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ. ಆದರೆ, ತಂಬಾಕಿನಂತಹ ಅಪಾಯಕಾರಿ ಅಂಶಗಳು ಪ್ರಮುಖ ಕಾರಣವಾಗಹುದು. ಹೀಗಾಗಿ ಇವುಗಳಿಂದ ದೂರ ಇರಬೇಕು. ರೋಗ ಲಕ್ಷಣ, ಅನುಮಾನಾಸ್ಪದ ಲಕ್ಷಣ ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು.
ಮಾಲಿನ್ಯದಿಂದ ಕ್ಯಾನ್ಸರ್: ಬೆಂಗಳೂರಿನಂತಹ ಮಹಾನಗರದಲ್ಲಿ ವಾತಾವರಣ ವೈಪರಿತ್ಯದಿಂದ ಜಲ, ವಾಯು, ಆಹಅರ ಮಾಲಿನ್ಯ ಸಾಮಾನ್ಯವಾಗಿ ಕಾಡುತ್ತದೆ. ಕರುಳಿನ ಕ್ಯಾನ್ಸರ್ ವಿಚಾರವಾಗಿ ಹೇಳುವುದಾದರೆ ಮಹಾ ನಗರಗಳಲ್ಲಿ 1 ಲಕ್ಷ ಮಂದಿಯಲ್ಲಿ ಕನಿಷ್ಠ 5 ಮಂದಿಗೆ ಬರುವ ಸಾಧ್ಯತೆ ಇರುತ್ತದೆ. ಇದು ಐಸಿಎಂಆರ್ ಸಂಶೋಧನೆ ಪ್ರಕಾರ ದಾಖಲಾದ ಮಾಹಿತಿ.
ಉತ್ತಮ ಜೀವನ ಕ್ರಮ ಅಳವಡಿಸಿಕೊಳ್ಳಿ: ಎಲ್ಲಾ ಸಮಸ್ಯೆ ಪರಿಹಾರಕ್ಕೆ ಉತ್ತಮ ಪರಿಸರದಲ್ಲಿ ವಾಸ್ತವ್ಯ ಮಾಡುವುದು ಸಹ ಮುಖ್ಯ. ಎಲ್ಲಾ ವಿಧದ ಮಾಲಿನ್ಯ ಕಡಿಮೆ ಇರುವ ವಾತಾವರಣದಲ್ಲಿ ಬದುಕುವುದರಿಂದ ಸಹ ರೋಗವನ್ನು ದೂರವಿಡಲು ಸಾಧ್ಯ. ಬಳಸುವಂತಹ ಯೂರಿಯಾ, ಸಲ್ಫೇಟ್, ಅಮೋನಿಯಾ ಸೇವನೆ ಕಡಿಮೆ ಮಾಡಿ. ಸಾಧ್ಯವಾದಷ್ಟು ಸಾವಯವ ಕೃಷಿಯ ಬೆಳೆ ಬಳಸಿ. ದೇಹವನ್ನು ದಂಡಿಸಿ, ಅಗತ್ಯವಾದಷ್ಟು ಮಾತ್ರ ಆಹಾರ ಬಳಸಿ. ಕ್ಯಾಲೊರಿ ಹೆಚ್ಚಾಗದಂತೆ ನೋಡಿಕೊಳ್ಳಿ. ಅಂದು ತಿಂದ ಆಹಾರವನ್ನು ಅಂದೇ ಕರಗಿಸಿಕೊಳ್ಳಬೇಕು. ವ್ಯಾಯಾಮ ಮಾಡಿ, ಧೂಮಪಾನ, ಮದ್ಯಪಾನದಿಂದ ದೂರವಿರಿ. ಮನಸ್ಸು ಮತ್ತು ಮೆದುಳಿನ ನಡುವೆ ಸಂಪರ್ಕ ಇರುತ್ತದೆ. ಇದರಿಂದ ಮಾನಸಿಕವಾಗಿ ದೃಢವಾಗಿರಿ. ಯೋಗ, ಧ್ಯಾನ ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಳ್ಳಿ. ಮನಸ್ಸಿಗೆ ಸಮಾಧಾನ ನೀಡುವ ಜೀವನ ಕ್ರಮ ಅಳವಡಿಸಿಕೊಳ್ಳಿ ಎನ್ನುತ್ತಾರೆ ಬೆಂಗಳೂರಿನ ಅಪೊಲೊ ಇನ್ಸ್ಟಿಟ್ಯೂಟ್ ಆಫ್ ಕೊಲೊರೆಕ್ಟಲ್ ಸರ್ಜರಿಯ ಮುಖ್ಯಸ್ಥ- ಡಾ. ನರಸಿಂಹಯ್ಯ ಶ್ರೀನಿವಾಸಯ್ಯ.
ಇದನ್ನೂ ಓದಿ: Cancer: ಭಾರತದಲ್ಲಿ ಹೆಡ್ & ನೆಕ್ ಕ್ಯಾನ್ಸರ್ ಪ್ರಕರಣ ಹೆಚ್ಚಳ: ಕಾರಣ ಇಲ್ಲಿದೆ!