ಬೆಂಗಳೂರು : ಕ್ಯಾನ್ಸ್ರ್ನಂತಹ ಮಾರಕ ರೋಗಗಳಿಗೆ ಬಳಕೆ ಮಾಡುವ ಔಷಧಗಳ ಬೆಲೆ ನಿಯಂತ್ರಣ ಹೇರದಿದ್ದಲ್ಲಿ ಬಹುಸಂಖ್ಯಾತ ಬಡ ಜನರ ಜೀವಕ್ಕೆ ಕುತ್ತು ಬರಲಿದೆ ಎಂದು ಅಭಿಪ್ರಾಯ ಪಟ್ಟಿರುವ ಹೈಕೋರ್ಟ್, ಕ್ಯಾನ್ಸ್‌ರ್ ರೋಗದ ಆರೈಕೆಗೆ ಬಳಕೆ ಮಾಡುವ ಔಷಧಗಳ ಮೇಲೆ ಶೇ.30 ಕನಿಷ್ಠ ಲಾಭಕ್ಕೆ ಮಿತಿ ಹೇರಿದ್ದ ಕೇಂದ್ರ ಸರ್ಕಾರದ ಕ್ರಮ ಎತ್ತಿಹಿಡಿದಿದೆ.
ಕ್ಯಾನ್ಸ್‌ರ್ ಕಾಯಿಲೆಗಳಿಗೆ ದೇಶದಾದ್ಯಂತ 20 ಔಷಧಗಳನ್ನು ಒದಗಿಸುತ್ತಿರುವ ಅತಿ ದೊಡ್ಡ ಸಂಸ್ಥೆಯಾದ ಹೆಲ್ತ್ ಕೇರ್ ಗ್ಲೋಬ್ಲಲ್ ಎಂಟರ್ ಪ್ರೈಸಸ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿದೆ. ಸರ್ಕಾರಗಳು ಈ ರೀತಿಯ ನೀತಿಗಳನ್ನು ಪ್ರಕಟಿಸದಿದ್ದಲ್ಲಿ ಈ ದೇಶದಲ್ಲಿನ ಬಹುಸಂಖ್ಯಾತ ಬಡವರು ಮತ್ತು ಮಧ್ಯಮ ವರ್ಗದ ಎದುರಾಗುವ ಆರೋಗ್ಯ ಸಮಸ್ಯೆಗಳಿಗೆ ಬಲಿಯಾಗಬೇಕಾಗುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.
ಸರ್ಕಾರಗಳು ಜನತೆಯ ಕಲ್ಯಾಣಕ್ಕಾಗಿ ಕಾನೂನುಗಳನ್ನು ರೂಪಿಸಬಹುದಾಗಿದೆ. ಕಾನೂನು ಬದ್ಧ ಸಂಸ್ಥೆಗಳು ಸಾರ್ವಜನಿಕ ಹಿತಾಸಕ್ತಿಯಲ್ಲಿ ಅಗತ್ಯ ಅಥವ ಸೂಕ್ತವೆಂದು ಭಾವಿಸುವ ಕ್ರಮವನ್ನು ತೆಗೆದುಕೊಳ್ಳುವುದಕ್ಕೆ ಅರ್ಹವಾಗಿರುತ್ತದೆ. ನ್ಯಾಯಾಲಯಗಳು ಸರ್ಕಾರದ ಸಂಸ್ಥೆಗಳ ಅಸಮಂಜತೆ ಮತ್ತು ವಿಲಕ್ಷಣತೆ ಪ್ರದರ್ಶನ ಮಾಡುವ ಸಂದರ್ಭದಲ್ಲಿ ಮಧ್ಯಪ್ರವೇಶಿಸಲಿವೆ ಎಂದು ನ್ಯಾಯಪೀಠ ತಿಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ಸಮಾಜದಲ್ಲಿ ಕ್ಯಾನ್ಸ್‌ರ್ ಪ್ರಮುಖ ರೋಗವಾಗಿದ್ದು, ವಿಶ್ವದಲ್ಲಿ 18 ಮಿಲಿಯನ್ ಮತ್ತು ಭಾರತ ದೇಶವೊಂದರಲ್ಲಿಯೇ 1.5ಮಿಲಿಯನ್ ಪ್ರಮಾಣದ ಜನ ಸಾವನ್ನಪ್ಪುತ್ತಿದ್ದಾರೆ. ಅಲ್ಲದೇ, ಈ ಪ್ರಮಾಣ ಮುಂದಿನ 15 ವರ್ಷಗಳಲ್ಲಿ ದುಪ್ಪಟ್ಟಾಗಲಿದೆ. ಹೀಗಾಗಿ ಕ್ಯಾನ್ಸರ್ ಕಾಯಿಲೆಗೆ ಔಷಧಗಳು ಕೈಗೆಟಕುವಂತಿರಬೇಕು ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.
ಪ್ರಕರಣದ ಹಿನ್ನೆಲೆ; ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವಾಲಯದ ಅಧೀನದ ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ 2019ರ ಫೆಬ್ರವರಿ 27ರಂದು ವಿವಿಧ 42 ಔಷಧಗಳ ಪಟ್ಟಿ ಮಾಡಿ ಉತ್ಪಾದನಾ ವೆಚ್ಚಕ್ಕಿಂತ ಶೇ.30 ಕ್ಕೂ ಹೆಚ್ಚು ಪ್ರಮಾಣದ ಲಾಭ ಪಡೆದುಕೊಳ್ಳದಂತೆ ನಿರ್ದೇಶನ ನೀಡಿತ್ತು.
ಇದನ್ನು ಪ್ರಶ್ನಿಸಿ ಹೆಲ್ತ್ ಕೇರ್ ಗ್ಲೋಬ್ಲಲ್ ಎಂಟರ್ ಪ್ರೈಸಸ್ ಲಿಮಿಟೆಡ್ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿದಾರರ ಪರ ವಕೀಲರು, ಕ್ಯಾನ್ಸರ್ ರೋಗಗಳ ಮೇಲೆ ನಿಯಂತ್ರಣ ಮಾಡುವಂತಹ ಸನ್ನಿವೇಶ ಎದುರಾಗಿಲ್ಲ. ಈ ರೀತಿಯ ಬೆಲೆ ನಿಯಂತ್ರಣ ಮಾಡುವುದು ಅಸಮಂಜಸವಾಗಿದೆ. ಅಲ್ಲದೇ, ಔಷಧಗಳ ಮಾರಾಟಕ್ಕೆ ಬೆಲೆ ನಿಗದಿ ಮಾಡಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ. ಹೀಗಾಗಿ ಬೆಲೆ ನಿಗದಿ ಮಾಡಿರುವ ಕ್ರಮವನ್ನು ರದ್ದುಗೊಳಿಸಬೇಕು ಎಂದು ವಾದಿಸಿದ್ದರು.
ಇದನ್ನೂ ಓದಿ:ಸಿಲಿಕಾನ್ ಸಿಟಿಯಲ್ಲಿ ತಗ್ಗಿದ ಸಂಚಾರ ದಟ್ಟಣೆ : ಸಂಚಾರಿ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ