ಬೆಂಗಳೂರು: ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಕ್ಯಾನ್ಸರ್ ಅನ್ನು ಪ್ರಾಥಮಿಕ ಹಂತದಲ್ಲಿ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡುವುದರಿಂದ ಕಾಯಿಲೆ ಗುಣಪಡಿಸಬಹುದು ಎಂದು ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಯ ಉಪ ನಿರ್ದೇಶಕ ಶೈಲೇಂದ್ರ ಶ್ರೀಕಂಡೆ ತಿಳಿಸಿದರು.
ಮಹಿಳೆಯರಲ್ಲಿ ಸಾಮಾನ್ಯವಾಗಿ ಸ್ತನ ಮತ್ತು ಗರ್ಭಕೋಶದಲ್ಲಿ ಕ್ಯಾನ್ಸರ್ ಕಾಯಿಲೆ ಹೆಚ್ಚಾಗಿ ಕಂಡುಬರುತ್ತದೆ. ಪ್ರಾಥಮಿಕ ಹಂತದಲ್ಲಿ ಸ್ತನ ಭಾಗದಲ್ಲಿ ಗಡ್ಡೆ ಉಂಟಾಗಿ, ಯೋನಿಯಲ್ಲಿ ರಕ್ತಸ್ರಾವ ಆದರೆ ಕ್ಯಾನ್ಸರ್ ಕಾಯಿಲೆ ಎಂದು ಪರಿಗಣಿಸಲಾಗುತ್ತದೆ. ಗರ್ಭಕೋಶ ಕ್ಯಾನ್ಸರ್ ವೈರಸ್ ಸೋಂಕಿನಿಂದ ಹರಡಲಿದ್ದು ಚುಚ್ಚುಮದ್ದು ತೆಗೆದುಕೊಳ್ಳುವುದರಿಂದ ಹತೋಟಿಗೆ ತರಲಾಗುವುದು ಎಂದರು.
ವೈದೇಹಿ ಆಸ್ಪತ್ರೆಯ ಕ್ಯಾನ್ಸರ್ ತಜ್ಞರಾದ ಡಾ.ಗೀತಾ ನಾರಾಯಣ್ ಮಾತನಾಡಿ, ಮಹಿಳೆಯರು ಮುಚ್ಚುಮರೆಯಿಲ್ಲದೆ ಸ್ತನಗಳಲ್ಲಿ ಗಡ್ಡೆ ಕಂಡುಬಂದಾಗ ತಕ್ಷಣವೇ ಚಿಕಿತ್ಸೆ ಪಡೆದ್ರೆ ಕ್ಯಾನ್ಸರ್ ಗುಣಪಡಿಸಬಹುದು. ತಂಬಾಕು ಉತ್ಪನ್ನಗಳ ಸೇವನೆಯಿಂದ ಆಗುವ ಹಾನಿಗಿಂತ ಡಾಂಬರು ಹಾಕುವ ಸಂದರ್ಭದಲ್ಲಿ ಟಾಕ್ಸಿಕ್ ಕೆಮಿಕಲ್‌ಗಳ ವಾಸನೆ ಹೀರುವ ಕಾರ್ಮಿಕರಿಗೆ ತೊಂದರೆ ಹೆಚ್ಚು. ಇವರಿಗೆ ಬಹುಬೇಗ ಕ್ಯಾನ್ಸರ್ ಬರುತ್ತದೆ. ಆದರೆ, ತಂಬಾಕು ಉತ್ಪನ್ನಗಳ ಬಳಕೆ ಪ್ರಮಾಣ ಹೇರಳವಾಗಿರುವುದರಿಂದ ಕ್ಯಾನ್ಸರ್‌ಗೆ ತುತ್ತಾಗುವ ಜನರ ಪ್ರಮಾಣವೂ ಹೆಚ್ಚಾಗಿದೆ ಎಂದು ವಿವರಿಸಿದರು.