ಬೆಂಗಳೂರು: ಗಾಂಧಿನಗರದ ಕಪಾಲಿ ಚಿತ್ರಮಂದಿರವಿದ್ದ ಪಕ್ಕದಲ್ಲಿ ಎರಡು ಕಟ್ಟಡಗಳು ಕುಸಿದ ಜಾಗಕ್ಕೆ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಹಾಗೂ ಆಯುಕ್ತ ಮಂಜುನಾಥ್ ಪ್ರಸಾದ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಪರಿಶೀಲನೆ ಬಳಿಕ ಮಾತನಾಡಿದ ಮಂಜುನಾಥ್ ಪ್ರಸಾದ್, ಬಿಬಿಎಂಪಿ ನೀಡಿರುವ ಪ್ಲಾನ್ ಪ್ರಕಾರ ಕಟ್ಟಡ ನಿರ್ಮಾಣ ಮಾಡಿಲ್ಲ. ಕಪಾಲಿ ಚಿತ್ರಮಂದಿರ ತೆರವಾದ ಬಳಿಕ ಆ ಜಾಗದಲ್ಲಿ ಕಟ್ಟಡ ಕಟ್ಟಲು ಪಾಯ ತೆಗೆಯಲಾಗಿತ್ತು. ಆದರೆ, ಕಟ್ಟಡ ನಿರ್ಮಾಣ ಮಾಡುವ ಮೊದಲು ನಾಲ್ಕು ಕಡೆ ತಡೆಗೋಡೆ ನಿರ್ಮಾಣ ಮಾಡಬೇಕು. ಅದ್ರೆ ಮೂರು ಕಡೆ ನಿರ್ಮಾಣ ಮಾಡಿದ್ದಾರೆ. ಒಂದು ಭಾಗದಲ್ಲಿ ರೀಟೈನಿಂಗ್ ವಾಲ್ ನಿರ್ಮಾಣ ಮಾಡಿಲ್ಲ. ತಡೆಗೋಡೆ ನಿರ್ಮಾಣ ಮಾಡದ ಕಾರಣ ಪಕ್ಕದ ಕಟ್ಟಡ ಕುಸಿದಿದೆ ಎಂದರು.
ಜಾಗದ ಮಾಲೀಕರು ಲಾಕ್ಡೌನ್ ಸಂದರ್ಭದಲ್ಲಿ ಕಾರ್ಮಿಕರು ಸಿಕ್ಕಿಲ್ಲ ಎಂಬ ಕಾರಣ ನೀಡಿ, ಒಂದು ಕಡೆ ರೀಟೈನಿಂಗ್ ವಾಲ್ ನಿರ್ಮಾಣ ಮಾಡಿಲ್ಲ ಅಂತಾ ಹೇಳ್ತಾ ಇದ್ದಾರೆ. ಈ ಕಟ್ಟಡ ಮಾಲೀಕರ ವಿರುದ್ದ ಎಫ್ ಐ ಆರ್ ದಾಖಲು ಮಾಡಿದ್ದೇವೆ. ಹಾನಿಗೆ ಒಳಗಾದ ಕಟ್ಟಡ ಮಾಲೀಕರಿಗೆ ಪರಿಹಾರ ನೀಡಬೇಕು. ಈಗಾಗಲೇ ಕಟ್ಟಡದ ಪ್ಲಾನ್ ಅನ್ನು ತಕ್ಷಣದಿಂದ ರದ್ದುಗೊಳಿಸುತ್ತೇವೆ. ಈಗ ಬಿದ್ದಿರೋ ಎರಡು ಕಟ್ಟಡದವರಿಗೆ ಪರಿಹಾರವನ್ನು ಭೂಮಾಲೀಕರು ನೀಡಬೇಕು. ಬಿಬಿಎಂಪಿ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಲಿದ್ದಾರೆ ಎಂದರು.
ಮೇಯರ್ ಗೌತಮ್ ಕುಮಾರ್ ಮಾತನಾಡಿ, ವಿಶೇಷ ಆಯುಕ್ತರು ಈಗಾಗಲೇ ಸೂಚನೆ ನೀಡಿದ್ದಾರೆ. ಯಾವ ಕಾರಣಕ್ಕೆ ಬಿಲ್ಡಿಂಗ್ ಬಿದ್ದಿದೆ ಎಂಬ ವರದಿ ಬರಬೇಕಿದೆ. ವರದಿಗಾಗಿ ನಾವು ಕಾಯುತ್ತಿದ್ದೇವೆ . ಈಗಾಗ್ಲೇ ಸ್ಥಳ ಪರಿಶೀಲನೆ ನಡೆಸಲಾಗಿದೆ. 2018 ರಲ್ಲಿ ಬಿಲ್ಡಿಂಗ್ ಪ್ಲಾನಿಂಗ್ ಅಪ್ರೂವಲ್ ನೀಡಲಾಗಿತ್ತು. ಅದನ್ನ ಈಗ ತಡೆ ಹಿಡಿಯಲಾಗಿದೆ. ಮಾಲೀಕರ ವಿರುದ್ಧ ಎಫ್ ಐಆರ್ ಆಗಿದೆ. ಅಧಿಕಾರಗಳು ಪರಿಶೀಲನೆ ನಡೆಸ್ತಿದ್ದಾರೆ. ಬಿಲ್ಡಿಂಗ್ ಕುಸಿದ ಪರಿಣಾಮ ಮತ್ಯಾವ ಮನೆಗಳಿಗೂ ಹಾನಿಯಾಗಿಲ್ಲ. ಕೇವಲ ಒಂದು ಮನೆಗೆ ಮಾತ್ರ ತೊಂದರೆ ಇದೆ. ಅವರನ್ನ ಖಾಲಿ ಮಾಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಎಷ್ಟು ಆಳ ಅಗೆಯಲಾಗಿದೆ, ಅನುಮತಿ ಎಷ್ಟಕ್ಕೆ ಪಡೆದಿದ್ದರು ಎಂಬ ಮಾಹಿತಿ ಬರಬೇಕಿದೆ. ಸಂಪೂರ್ಣ ವರದಿ ಕೈ ಸೇರಿದ ಬಳಿಕ ಮತ್ತಷ್ಟು ಮಾಹಿತಿ ಸಿಗಲಿದ್ದು ಕ್ರಮ ಕೈಗೊಳ್ಳುವುದಾಗಿ ಮೇಯರ್ ಸ್ಪಷ್ಟಪಡಿಸಿದ್ದಾರೆ.