ಬೆಂಗಳೂರು: ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿ ಗಮನ ಸೆಳೆದಿರುವ ಕೆನಡಾದ ಸಂಸದ ಚಂದ್ರ ಆರ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆದಿದ್ದಾರೆ. ಬುಧವಾರ ಕಸಾಪ ಕಚೇರಿಗೆ ತಮ್ಮ ಕುಟುಂಬದೊಂದಿಗೆ ಭೇಟಿ ನೀಡಿದ ಅವರಿಗೆ ಅಧ್ಯಕ್ಷ ಮಹೇಶ ಜೋಶಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ನೀಡಿದರು.
ಈ ಕುರಿತು ಮಾತನಾಡಿದ ಚಂದ್ರ ಆರ್ಯ, ಜಾತಿ, ಮತ, ಪಂಥ, ಧರ್ಮಗಳ ಕಟ್ಟುಗಳನ್ನು ಮೀರಿ ಏಕಸೂತ್ರದಲ್ಲಿ ಎಲ್ಲರನ್ನೂ ಒಂದು ಮಾಡುವ ಶಕ್ತಿ ಮಾತೃಭಾಷೆಗಿದೆ. ಈ ಭಾಷಾಬಂಧನಕ್ಕೆ ಪ್ರಪಂಚದಲ್ಲಿ ಎಲ್ಲರನ್ನೂ ಒಂದು ಮಾಡುವ ಶಕ್ತಿ ಇದೆ. ಇತ್ತೀಚಿನ ದಿನಗಳಲ್ಲಿ ಮಹೇಶ ಜೋಶಿ ಅವರ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಜನಸಾಮಾನ್ಯರ ಪರಿಷತ್ತಾಗುತ್ತಿದೆ. ಇಲ್ಲಿ ನಡೆಯುತ್ತಿರುವ ಎಲ್ಲಾ ಕಾರ್ಯಚಟುವಟಿಕೆಗಳು ಕನ್ನಡ-ಕನ್ನಡಿಗ-ಕರ್ನಾಟಕವನ್ನು ಗಟ್ಟಿಗೊಳಿಸುವಂಥದ್ದು ಎಂದರು.
ಮಹೇಶ ಜೋಶಿ ಮಾತನಾಡಿ, ಚಂದ್ರ ಆರ್ಯ ಕೆನಾಡದ ಸಂಸದರಾಗಿ ಪ್ರಮಾಣವಚನವನ್ನು ಕನ್ನಡದಲ್ಲೇ ಸ್ವೀಕರಿಸುವುದರ ಮೂಲಕ ಭಾಷಾಭಿಮಾನ ಮೆರೆದಿದ್ದರು. ಅಲ್ಲದೇ ಕೆನಡಾದಲ್ಲಿ ಪರಿಷತ್ತಿನ ಘಟಕದ ಮುಂದಾಳತ್ವವನ್ನು ತೆಗೆದುಕೊಂಡಿರುವುದು ಶ್ಲಾಘನೀಯ. ಹಾವೇರಿಯಲ್ಲಿ ನಡೆಯಲಿರುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಖ್ಯ ಅಥಿತಿಗಳಾಗಿ ಭಾಗವಹಿಸುವುದಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಲಂಚ ಪಡೆದು ಅನರ್ಹರಿಗೆ ಶಸ್ತ್ರಾಸ್ತ್ರ ಪರವಾನಗಿ: ಐಎಎಸ್ ಅಧಿಕಾರಿಯನ್ನು ಬಂಧಿಸಿದ ಸಿಬಿಐ