ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ಆರಂಭವಾಗಿದೆ. ಸಭೆಯಲ್ಲಿ ಕೊರೊನಾ ಹಾವಳಿಯಿಂದ ಮುಂದೂಡಲ್ಪಟ್ಟಿರುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು 2022 ರ ಫೆಬ್ರವರಿಯಲ್ಲಿ ಆಯೋಜಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರವಾಗುವ ಸಾಧ್ಯತೆಯಿದೆ.
ವಿಧಾನಸೌಧದ ಆವರಣದಲ್ಲಿ ಬಸವೇಶ್ವರ ಪ್ರತಿಮೆ ಸ್ಥಾಪಿಸುವ ಕುರಿತಂತೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡುವ ಸಾಧ್ಯತೆಯಿದೆ. ಗೋಹತ್ಯೆ ನಿಷೇಧ ಕಾಯ್ದೆ ಅನ್ವಯ ಮೊದಲ ಹಂತದಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಗೋ ಶಾಲೆ ತೆರೆಯಲು 15 ಕೋಟಿ ರೂ. ಮೊತ್ತಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಬಹುದು ಎನ್ನಲಾಗಿದೆ.
ರಾಜ್ಯದಲ್ಲಿ ಆಕ್ಸಿಜನ್ ಘಟಕ ಆರಂಭಿಸಲು ವಿಶೇಷ ಪ್ರೋತ್ಸಾಹ ನೀಡಲು ಒಪ್ಪಿಗೆ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆಯಿದ್ದು, ರಾಜ್ಯದಲ್ಲಿ 2021-22 ನೇ ಸಾಲಿನ ಬೆಳೆ ಸಮೀಕ್ಷೆ ಯೋಜನೆ ಜಾರಿಗೆ ಅನುಮೋದನೆ ನೀಡಲು ಮುಂದಾಗಿದೆ. ಜೆಒಸಿ ಕೋರ್ಸ್‌ಗಳನ್ನು ಪಿಯುಸಿ ತತ್ಸಮಾನ ಎಂದು ಪರಿಗಣಿಸಲು ತೀರ್ಮಾನಿಸುವ ನಿರೀಕ್ಷೆಯಿದೆ. ಉಳಿದಂತೆ ಜೀವಾವಧಿ ಶಿಕ್ಷೆಗೆ ಒಳಗಾಗಿರುವ 108 ಅಪರಾಧಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲು ಅನುಮತಿ ನೀಡುವ ಬಗ್ಗೆ ಚರ್ಚೆ ನಡೆಸಲಾಗುವುದು.
ಇದನ್ನೂ ಓದಿ:ನಾಳೆ ದಕ್ಷಿಣ ಭಾರತ ರಾಜ್ಯಗಳ ಸಿಎಂಗಳ ಜತೆ ಪಿಎಂ ವಿಡಿಯೋ ಸಂವಾದ: CM BSY ಭಾಗಿ
ಮೈಸೂರಿನ ಲಲಿತ ಮಹಲ್ ಪ್ಯಾಲೇಸ್ ನಿರ್ವಹಣೆಗೆ ಹೋಟೆಲ್ ಆಪರೇಟರ್ಗಳನ್ನು ಆಯ್ಕೆ ಮಾಡಲು ಹಾಗೂ ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ ಲಿ.ಗೆ ಉಸ್ತುವಾರಿ ನೋಡಿಕೊಳ್ಳಲು ಒಪ್ಪಿಗೆ ನೀಡುವ ಸಂಬಂಧ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ.