ಬೆಂಗಳೂರು: ಪ್ರವಾಹದಲ್ಲಿ ಕಾಫಿ, ತೋಟಗಾರಿಕಾ ಬೆಳೆಗಳು ಹಾಗೂ ಸಾಂಬಾರು ಪದಾರ್ಥಗಳು ತೀವ್ರ ಹಾನಿಗೊಳಗಾಗಿದ್ದು, ಈ ಸಂಬಂಧ ವಿಶೇಷ ಅನುದಾನಕ್ಕೆ ಕೇಂದ್ರಕ್ಕೆ ಮನವಿ ಮಾಡಲು ಸಂಪುಟ ಸಭೆ ನಿರ್ಧಾರ ಕೈಗೊಂಡಿದೆ.
ಸಂಪುಟ ಸಭೆ ಬಳಿಕ ಮಾತನಾಡಿದ ಸಚಿವ ಮಾಧುಸ್ವಾಮಿ, ಸಂಪುಟ ಸಭೆಯಲ್ಲಿ ನೆರೆಹಾವಳಿ ಸಂತ್ರಸ್ತರಿಗೆ ಪರಿಹಾರ ಸಂಬಂಧ ಚರ್ಚೆ ನಡೆಸಲಾಯಿತು. ಎನ್ ಡಿಆರ್ ಎಫ್ ನಿಯಮಾವಳಿ ಮೀರಿ ಪರಿಹಾರ ನೀಡುವ ಬಗ್ಗೆ, ನಿಯಮಾವಳಿ ಸರಳೀಕರಣಗೊಳಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ಕೇಂದ್ರಕ್ಕೆ ನಿಯೋಗವೊಂದನ್ನು ಕರೆದೊಯ್ದು, ಪ್ರಧಾನಿ ಮೋದಿಯವರನ್ನು ಭೇಟಿಯಗಾಗಿ, ಕಾಫಿ, ಸಾಂಬಾರ್ ಪದಾರ್ಥ, ಕಬ್ಬನ್ನು ವಿಮೆ ಯೋಜನೆಗೆ ತರಲು ಮನವಿ ಮಾಡಲಾಗುತ್ತದೆ ಎಂದು ಇದೇ ತಿಳಿಸಿದರು. ಪ್ರವಾಹಕ್ಕೆ ಸುಮರು 42 ಲಕ್ಷ ಕುಟುಂಬ ಮನೆ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದಾರೆ. ಈಗಾಗಲೇ ಒಂದು 1.35 ಲಕ್ಷ ಕುಟುಂಬಕ್ಕೆ ತಲಾ ಹತ್ತು ಸಾವಿರ ರೂ. ನೀಡಲಾಗಿದೆ ಎಂದರು.
ಸಂಪುಟದ ಪ್ರಮುಖ ನಿರ್ಧಾರಗಳು:
- ಹೊಸ ಪಿಂಚಣಿ ಯೋಜನೆಯಡಿ ರಾಜ್ಯದ ನೌಕರರಿಗೆ ಶೇ.10 ರಷ್ಟು ರಾಜ್ಯದ ಪಾಲು ನೀಡಲಾಗುತ್ತಿತ್ತು. ಅದನ್ನು ಈಗ ಶೇ.14 ಕ್ಕೆ ಹೆಚ್ಚಿಸಲು ನಿರ್ಧಾರ. 27.96 ಕೋಟಿ ಪ್ರತಿ ತಿಂಗಳು ಹೊರೆಯಾದರೆ, ವಾರ್ಷಿಕ 300 ಕೋಟಿ ಬೊಕ್ಕಸಕ್ಕೆ ಹೊರೆ
- ದಾವಣಗೆರೆಯ 53 ಕೆರೆಗಳಿಗೆ ನೀರು ತುಂಬಿಸಲು 660 ಕೋಟಿಗೆ ಡಿಪಿಆರ್ ಆಗಿತ್ತು. ಹಣದ ಕೊರತೆ ಕಾರಣ ಸ್ಥಗಿತವಾಗಿದ್ದ ಕಾಮಗಾರಿಯನ್ನು ಈಗ ಎರಡು ಹಂತಗಳಲ್ಲಿ ಕೈಗೊಳ್ಳಲು ನಿರ್ಧಾರ. ಮೊದಲ ಹಂತದ ಕಾಮಗಾರಿಗೆ 250 ಕೋಟಿ ಬಿಡುಗಡೆ.
- ಬರಪೀಡಿತ ಪ್ರದೇಶದಲ್ಲಿ ಬೋರ್ ವೆಲ್ ಕೊರೆಯಲು ಐದು ಲಕ್ಷ ವರೆಗೆ ಟೆಂಡರ್ ಪ್ರಕ್ರಿಯೆಗೆ ವಿನಾಯಿತಿ. ಶಾಸಕರ ಅಧ್ಯಕ್ಷತೆಯ ಟಾಸ್ಕ್ ಫೋರ್ಸ್ ಬೋರ್ ವೆಲ್ ಕೊರೆಯಲು ಅನುಮತಿ ನೀಡಲಿದೆ.
- ಅಂತರ ರಾಜ್ಯ ನದಿ ವಿವಾದಗಳಾದ ಕಾವೇರಿ, ಕೃಷ್ಣಾ, ಮಹದಾಯಿ ಸಂಬಂಧ ಕಾನೂನು ಸಮರದ ತ್ವರಿತ ಇತ್ಯರ್ಥ ಹಾಗೂ ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯುವ ಸಲುವಾಗಿ ಸಿಎಂ ನೇತೃತ್ವದ ಉಪ ಸಂಪುಟ ಸಮಿತಿ ರಚನೆಗೆ ನಿರ್ಧಾರ. ಸಚಿವರಾದ ಬಸವರಾಜ ಬೊಮ್ಮಾಯಿ, ಆರ್. ಅಶೋಕ್, ಗೋವಿಂದ ಕಾರಜೋಳ ಉಪಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ.
- ಸನ್ನಡತೆ ಆಧಾರದಲ್ಲಿ ಜೀವಾವಾಧಿ ಶಿಕ್ಷೆ ಹಾಗೂ 10 ವರ್ಷಕ್ಕಿಂತ ಮೇಲ್ಪಟ್ಟು ಸೆರೆಮನೆವಾಸ ಅನುಭವಿಸುತ್ತಿರುವ 140 ಕೈದಿಗಳ ಬಿಡುಗಡೆಗೆ ರಾಜ್ಯಪಾಲರಿಗೆ ಶಿಫಾರಸು ಮಾಡಲು ನಿರ್ಧಾರ.
- ಪ್ರತಿ ಮಂಗಳವಾರ ಸಂಪುಟ ಸಭೆ ನಡೆಸಲು ನಿರ್ಧಾರ