ಬೆಂಗಳೂರು: ಪ್ರಯಾಣಿಕರಿಂದ ಹೆಚ್ಚಿನ ದರ ವಸೂಲಿ ಮಾಡಿ ಆಟೋರಿಕ್ಷಾ ಸೇವೆ ನೀಡುತ್ತಿದ್ದ ಆ್ಯಪ್ ಆದಾರಿತ ಓಲಾ, ಉಬರ್ ಟ್ಯಾಕ್ಸಿ ಸಂಸ್ಥೆಗಳಿಗೆ ಸಾರಿಗೆ ಇಲಾಖೆ ಶಾಕ್ ನೀಡಿದೆ. ಕಾನೂನು ಬಾಹಿರವಾಗಿ ಲೈಸೆನ್ಸ್ ಪಡೆಯದೇ ನಡೆಸುತ್ತಿದ್ದ ಆಟೋರಿಕ್ಷಾ ಸೇವೆಯನ್ನು ತಕ್ಷಣದಿಂದಲೇ ನಿಲ್ಲಿಸುವಂತೆ ಸಾರಿಗೆ ಇಲಾಖೆ ಆದೇಶ ನೀಡಿದೆ.
ಆ್ಯಪ್ ಆಧಾರಿತ ಟ್ಯಾಕ್ಸಿ ಸೆವೆ ಒದಗಿಸುತ್ತಿದ್ದ ಓಲಾ, ಉಬರ್ ಸಂಸ್ಥೆಗಳು ಆಟೋ ಸಂಚಾರಕ್ಕೆ ಸಾರಿಗೆ ಇಲಾಖೆಯಿಂದ ಪರವಾನಗಿ ಪಡೆಯದೇ ಆಟೋ ಸಂಚಾರ ಸೇವೆ ಒದಗಿಸುತ್ತಿರುವುದು ಕಾನೂನುಬಾಹಿರವಾಗಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಬೆಂಗಳೂರು ನಗರದಲ್ಲಿ ಆಟೋ ಸಂಚಾರಕ್ಕೆ ಕನಿಷ್ಟ ದರ 30 ರೂ. ನಿಗದಿಪಡಿಸಲಾಗಿದ್ದರೂ ಆ್ಯಪ್ ಆಧಾರಿತ ಅಗ್ರಿಗೆಟರ್ಗಳು ಕನಿಷ್ಠ ದರವಾಗಿ 100 ರೂಪಾಯಿಯನ್ನು ಪ್ರಯಾಣಿಕರಿಂದ ವಸೂಲು ಮಾಡುತ್ತಿರುವುದಕ್ಕೆ ಸಾರಿಗೆ ಇಲಾಖೆ ಆಕ್ಷೇಪ ವ್ಯಕ್ತಪಡಿಸಿ ಓಲಾ, ಉಬರ್ ಟ್ಯಾಕ್ಸಿ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿದೆ.
ಹೆಚ್ಚಿನ ದರವನ್ನು ವಸೂಲು ಮಾಡುತ್ತ ಕಾನೂನು ಬಾಹಿರವಾಗಿ ಆಟೋರಿಕ್ಷಾ ಸೇವೆ ಒದಗಿಸುತ್ತಿರುವ ಬಗ್ಗೆ 3 ದಿನಗಳಲ್ಲಿ ಸಾರಿಗೆ ಇಲಾಖೆಗೆ ವಿವರ ನೀಡುವಂತೆ ನೋಟಿಸ್ನಲ್ಲಿ ಸೂಚಿಸಲಾಗಿದೆ.
ಟ್ಯಾಕ್ಸಿ ಸೇವೆಗೆ ಪಡೆಯಲಾದ ಲೈಸೆನ್ಸ್ನಲ್ಲಿಯೇ ಆಟೋರಿಕ್ಷಾ ಸೇವೆಯನ್ನೂ ಒದಗಿಸುತ್ತಿರುವುದು ಕಾನೂನಿನ ಉಲ್ಲಂಘನೆಯಾಗಿದೆ. ಆ್ಯಪ್ ಆಧಾರಿತ ಅಗ್ರಿಗೆಟರ್ಗಳಿಗೆ ಟ್ಯಾಕ್ಸಿ ಸೇವೆ ಒದಗಿಸಲು ಮಾತ್ರ ರಾಜ್ಯ ಸರ್ಕಾರ ಪರವನಗಿ ನೀಡಿದೆ. ಇದರ ಹೊರತಾಗಿ ಟ್ಯಾಕ್ಸಿ ಲೈಸೆನ್ಸ್ನ ಹೆಸರಲ್ಲಿ ಆಟೋ ರಿಕ್ಷಾ ಸೇವೆ ನೀಡಲು ಕಾನೂನಿನಲ್ಲಿ ಅವಕಾಶ ಇರುವುದಿಲ್ಲ.
ಹಾಗೂ ಸಾರಿಗೆ ಇಲಾಖೆ ನಿಗದಿ ಪಡಿಸಿದ ಕನಿಷ್ಠ ದರಕ್ಕಿಂತ ಹೆಚ್ಚಿನ ದರವನ್ನು ಆಟೋರಿಕ್ಷಾಗಳಿಗೆ ಪಡೆಯುವುದು ನಿಯಮ ಬಾಹಿರವಾದದು ಎಂದು ರಾಜ್ಯ ರಸ್ತೆ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ ಹಾಗೂ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ನೋಟಿಸ್ ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಅತಿ ಹಗುರ OLED ಲ್ಯಾಪ್ಟಾಪ್ ಏಸರ್ 'ಸ್ವಿಫ್ಟ್ ಎಡ್ಜ್' ಬಿಡುಗಡೆ