ಬೆಂಗಳೂರು: ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತೇನೆ ಎನ್ನುವ ವಿಷಯ ಸತ್ಯಕ್ಕೆ ದೂರವಾಗಿದೆ. ಇಂತಹ ಹೇಳಿಕೆಗಳಿಂದ ನನ್ನನ್ನ, ನನ್ನ ಅಚಲ ವಿಶ್ವಾಸವನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ಪಕ್ಷ ನನ್ನನ್ನು ಎರಡು ಬಾರಿ ಸಚಿವನನ್ನಾಗಿ ಮಾಡಿದೆ. ಸೋತರೂ ಪರಿಷತ್ ಸದಸ್ಯರನ್ನಾಗಿ ಮಾಡಿದ್ದಾರೆ. ನಾನು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಮುಂದಿನ ತಿಂಗಳಿನಿಂದ ಬಹಳಷ್ಟು ಜನ ಶಾಸಕರು ಬಿಜೆಪಿ ಸೇರಲಿದ್ದಾರೆ ಎಂದು ಕಾಂಗ್ರೆಸ್ಗೆ ಸಿ.ಪಿ. ಯೋಗೀಶ್ವರ್ ಟಾಂಗ್ ನೀಡಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣಾ ಸಮಯದಲ್ಲಿದ್ದೇವೆ. ಸಾಮಾನ್ಯವಾಗಿ ಪಕ್ಷ ಸೇರುತ್ತಾರೆ. ಬಿಡುತ್ತಾರೆ ಎನ್ನುವ ಪರ-ವಿರೋಧ ಹೇಳಿಕೆ ಬರುತ್ತಿರುತ್ತವೆ. ಇಲ್ಲಿಯವರೆಗೂ ಬಿಜೆಪಿಯ ಯಾವುದೇ ಶಾಸಕರು, ಪ್ರಮುಖ ವ್ಯಕ್ತಿಗಳು ಕಾಂಗ್ರೆಸ್ಗೆ ಹೋದ ಉದಾಹರಣೆ ಬಹಳ ಕಡಿಮೆ. ಇತಿಹಾಸದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಅಂತಹ ಉದಾಹರಣೆ ಸಿಗಬಹುದು.
ಆದರೆ, ಎರಡು ವರ್ಷದ ಹಿಂದೆ ಮೈತ್ರಿ ಸರ್ಕಾರ ಇದ್ದರೂ ಬೇಸತ್ತು ಕಾಂಗ್ರೆಸ್ ಜೆಡಿಎಸ್ ತೊರೆದು ಶಾಸಕರು ಬಿಜೆಪಿಗೆ ಬಂದರು. ಅದು ಕಣ್ಮುಂದೆ ಇದೆ. ಹಾಗಿದ್ದರೂ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಗಾಳಿಯಲ್ಲಿ ಗುಂಡು ಹಾರಿಸುವ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಬಿಟ್ಟ ನಿದರ್ಶನವಿದೆಯೇ ಹೊರತು ಬಿಜೆಪಿಯಿಂದ ಹೋದ ನಿದರ್ಶನಗಳು ಇಲ್ಲ ಎಂದರು.
ಬಿಜೆಪಿಗೆ ಬರಲು ಕಾಂಗ್ರೆಸ್ನ ಬಹಳಷ್ಟು ಮಂದಿ ಶಾಸಕರು ಸರದಿ ಸಾಲಿನಲ್ಲಿ ನಿಂತಿದ್ದಾರೆ. ಅವರೆಲ್ಲ ಬಿಜೆಪಿ ಸೇರಲು ಸಿದ್ಧರಿದ್ದಾರೆ. ಈ ಹಿಂದೆಯೂ ಇದು ಸಾಬೀತಾಗಿದೆ. ಹಾಗಾಗಿ, ಈಗ ಬಿಜೆಪಿ ಬಿಟ್ಟು ಯಾರೂ ಹೋಗಲ್ಲ. ಕಾಂಗ್ರೆಸ್- ಜೆಡಿಎಸ್ನಿಂದ ಈಗಾಗಲೇ ಕೆಲವರು ಬಿಜೆಪಿಗೆ ಬಂದಿದ್ದಾರೆ. ಮುಂದೆಯೂ ಬರಲಿದ್ದಾರೆ ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಶೀತಲ ಸಮರ ನಡೆಯುತ್ತಿದೆ. ಪಕ್ಷದಲ್ಲಿ ಮೇಲುಗೈ ಸಾಧಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಅಲ್ಲಿ ನಾಯಕತ್ವ ಕೊರತೆ ಇದೆ. ಪಕ್ಷವನ್ನು ಅಧಿಕಾರಕ್ಕೆ ತರುವ ದೃಢವಾದ ನಂಬಿಕೆ ಅವರಿಗಿಲ್ಲ. ಹಾಗಾಗಿ, ಕಾಂಗ್ರೆಸ್ ಶಾಸಕರು ಬಿಜೆಪಿ ಕಡೆ ಬರಲಿದ್ದಾರೆ ಎಂದರು.
ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಅವರ ಹೆಸರು ಬಹಿರಂಗ ಮಾಡಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಸುಳ್ಳು ಹೇಳಿಕೆ ನೀಡಿದ್ದಾರೆ. ನಾವು ಮುಂದಿನ ದಿನದಲ್ಲಿ ಬಿಜೆಪಿಗೆ ಸೇರುವ ಕಾಂಗ್ರೆಸ್ ಶಾಸಕರ ಹೆಸರು ಹೇಳಲಿದ್ದೇವೆ. ಪಕ್ಷದ ಕಚೇರಿಯಲ್ಲೇ ಅವರನ್ನೆಲ್ಲಾ ಸೇರಿಸಿಕೊಳ್ಳುತ್ತೇವೆ ಎಂದು ಯೋಗೀಶ್ವರ್ ತಿಳಿಸಿದರು.
ಇದೇ ವೇಳೆ ಸಂಪುಟ ವಿಸ್ತರಣೆ ವಿಚಾರದಲ್ಲಿ ಪಕ್ಷದ ವರಿಷ್ಠರು ತೀರ್ಮಾನ ಮಾಡಲಿದ್ದಾರೆ. ನಾನು ಆಕಾಂಕ್ಷಿಯೇನಲ್ಲ, ಅಧಿಕಾರ ಸಿಗಲಿ, ಬಿಡಲಿ ಪಕ್ಷದ ಕೆಲಸ ಮಾಡಿಕೊಂಡು ಇರುತ್ತೇನೆ ಎಂದು ಸೈನಿಕ ಸ್ಪಷ್ಟನೆ ನೀಡಿದರು.
ಓದಿ: ಅಧಿಕ ತೆರಿಗೆ, ಕೋವಿಡ್ನಿಂದ ರಾಜ್ಯದಲ್ಲಿ ಚಿತ್ರಮಂದಿಗಳು ಬಾಗಿಲು ಹಾಕ್ತಿವೆ : ರಾಜಾರಾಂ