ಬೆಂಗಳೂರು: ದೆಹಲಿಯಿಂದ ವಾಪಸಾಗಿರುವ ಪಕ್ಷದ ಹಿರಿಯ ನಾಯಕರಾದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ರಾಜಕೀಯ ವಿದ್ಯಮಾನಗಳ ಕುರಿತು ಮಾತುಕತೆ ನಡೆಸಿದ್ದೇನೆ. ಪ್ರಮುಖವಾಗಿ ಪಕ್ಷದ ಸಂಘಟನೆ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬಿಎಸ್ವೈ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ದೆಹಲಿಯಲ್ಲಿ ರಾಷ್ಟ್ರೀಯ ನಾಯಕರ ಭೇಟಿಯಾಗಿ ಬಂದಿದ್ದಾರೆ. ಪ್ರಧಾನಿಗಳು 2ನೇ ತಾರೀಖು ಮಂಗಳೂರಿಗೆ ಬರುತ್ತಿದ್ದಾರೆ. ಪ್ರಧಾನಿ ಅವರ ಕಾರ್ಯಕ್ರಮದ ಯಶಸ್ಸು ಬಗ್ಗೆ ಚರ್ಚೆ ಮಾಡಿದ್ದೇವೆ.
ಸೆಪ್ಟೆಂಬರ್ ಅಕ್ಟೋಬರ್ನಲ್ಲಿ ಜನ ಸಂಪರ್ಕ ಪ್ರವಾಸ, ಆರು ಕಡೆ ರ್ಯಾಲಿ ಹಾಗೂ ನಾವು ಯಡಿಯೂರಪ್ಪ, ಕಟೀಲ್ ವಿವಿಧ ತಂಡಗಳಲ್ಲಿ ಪ್ರವಾಸ ಮಾಡುವ ಬಗ್ಗೆ ಚರ್ಚೆ ನಡೆಸಿದ್ದೇವೆ. ರಾಜ್ಯಮಟ್ಟದ ಸಭೆಯನ್ನು ಮಾಡಿ, ಸೆಪ್ಟೆಂಬರ್ ಅಕ್ಟೋಬರ್ ತಿಂಗಳಿನ ಪ್ರವಾಸದ ಬಗ್ಗೆ ನಿರ್ಧಾರ ಮಾಡಲಾಗುತ್ತದೆ. ಸೆಪ್ಟೆಂಬರ್ 8 ರಂದು ಜನೋತ್ಸವದ ಬಗ್ಗೆ ಬಿಎಸ್ವೈ ಅವರಿಗೆ ಮಾಹಿತಿ ನೀಡಿದ್ದೇನೆ ಎಂದು ಹೇಳಿದರು.
16 ಜಿಲ್ಲೆಗಳಲ್ಲಿ ಅಧಿಕಾರಿಗಳಿಂದ ಮಳೆ ಬಗ್ಗೆ ಮಾಹಿತಿ ಪಡೆದಿದ್ದೇನೆ. ಬೆಂಗಳೂರು- ಮೈಸೂರು ಹೆದ್ದಾರಿ ರಸ್ತೆ ಅವಾಂತರದ ಬಗ್ಗೆ ಮಾಹಿತಿ ಪಡೆದಿದ್ದೇನೆ. ಅಲ್ಲಿ ನೀರು ನಿಂತಿರೋದನ್ನ ಗಮನಿಸಿ, ಅಲ್ಲಿನ ಎಸ್ ಪಿಗಳಿಗೆ ಸೂಚನೆ ನೀಡಿದ್ದೇನೆ. ಪರ್ಯಾಯ ಮಾರ್ಗವನ್ನು ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲು ಸೂಚನೆ ನೀಡಿದ್ದೇನೆ. ಅಲ್ಲಿನ ನಮ್ಮ ಜಿಲ್ಲಾಧಿಕಾರಿಗಳ ಜೊತೆಗೂ ಚರ್ಚೆ ಮಾಡಿದ್ದೇನೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತ ನೀರನ್ನು ಕ್ಲಿಯರ್ ಮಾಡಲು ಸೂಚನೆ ನೀಡಿದ್ದೇನೆ ಎಂದರು.
ಮನೆ ಕಳೆದುಕೊಂಡವರಿಗೆ ಪರಿಹಾರ ಕೊಡಲು ಸೂಚಿಸಿದ್ದೇನೆ. ಉತ್ತರ ಕರ್ನಾಟಕ ಭಾಗದಲ್ಲಿಯೂ ಇದೇ ಸೂಚನೆ ನೀಡಿದ್ದೇನೆ. ಮೈಸೂರು ಡಿಸಿಗೂ ಸೂಚನೆ ನೀಡಿದ್ದು, ಎಲ್ಲರಿಗೂ ಕೆರೆ ಕಟ್ಟೆಗಳ ಮೇಲೆ ನಿಗಾ ವಹಿಸಲು ಸೂಚಿಸಿರುವುದಾಗಿ ಮುಖ್ಯಮಂತ್ರಿ ಅವರು ಮಾಹಿತಿ ನೀಡಿದರು.
ಕೆರೆ ಕಟ್ಟೆ ಒಡೆಯುವ ಸಾಧ್ಯತೆ ಇರುವ ಕಡೆ ಸುರಕ್ಷಿತ ಕ್ರಮ ವಹಿಸಲು ಸೂಚನೆ ನೀಡಿದ್ದೇನೆ. 900 ಕೋಟಿ ಹಣ ರಾಜ್ಯದ ಎಲ್ಲಾ ಡಿಸಿಗಳ ಅಕೌಂಟ್ನಲ್ಲಿದೆ. ಎಲ್ಲೆಲ್ಲಿ ಜನವಸತಿಗೆ ನೀರು ಹೋಗಿದೆಯೋ, ಅಲ್ಲಿ ತಾತ್ಕಾಲಿಕ ಆಶ್ರಯಕ್ಕೆ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ್ದೇನೆ. ಬೆಳೆ ಸಮೀಕ್ಷೆ ಮಾಡಿ, ಪರಿಹಾರಕ್ಕೆ ಸೂಚನೆ ನೀಡಿದ್ದೇನೆ ಎಂದರು.
ಇದನ್ನೂ ಓದಿ : ಬೆಳಗ್ಗೆಯೇ ಯಡಿಯೂರಪ್ಪ ಮನೆಗೆ ಸಿಎಂ ಬೊಮ್ಮಾಯಿ ಭೇಟಿ.. ಹೈಕಮಾಂಡ್ ಸಂದೇಶಗಳ ಕುರಿತು ಸಮಾಲೋಚನೆ