ಬೆಂಗಳೂರು: ರಮೇಶ್ ಜಾರಕಿಹೊಳಿ ತಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ ಎಂಬ ಆರೋಪ ಮಾಡಿದ್ದಾರೆ ಅಂದ್ರೆ ಒಂದು ಬಲವಾದ ಕಾರಣ ಇದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.
ನಗರದ ಪಕ್ಷದ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಈ ಘಟನೆ ನಡೆದ ನಂತರ ಷಡ್ಯಂತ್ರ ಇತ್ತು ಅಂದಿದ್ದಾರೆ. ಅವರ ಹೇಳಿಕೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಇದರ ಹಿಂದೆ ದೊಡ್ಡ ದೊಡ್ಡ ಕೈಗಳೇ ಇವೆ. ಸಿಡಿ ತನಿಖೆ ಬಗ್ಗೆ ಸಿಎಂ, ಗೃಹ ಸಚಿವರು ಚರ್ಚಿಸಿ ನಿರ್ಧರಿಸ್ತಾರೆ. ಇದು ವೈಯಕ್ತಿಕ ದ್ವೇಷವೋ, ರಾಜಕೀಯ ದ್ವೇಷವೋ ಅಂತ ತನಿಖೆ ಬಳಿಕ ಗೊತ್ತಾಗುತ್ತೆ ಎಂದರು.
ಜಾರಕಿಹೊಳಿ ಸಹೋದರರು ಮತ್ತೊಮ್ಮೆ ಸಿಎಂ ಭೇಟಿ ಮಾಡಿ ಚರ್ಚೆ ಮಾಡ್ತಾರೆ. ಅವರ ಅಪೇಕ್ಷೆಯಂತೆ ತನಿಖೆ ನಡೆಸುವ ಬಗ್ಗೆ ಸಿಎಂ ತೀರ್ಮಾನ ತಗೋತಾರೆ. ಓರ್ವ ಮಂತ್ರಿ ವಿರುದ್ಧ ಹೀಗೆ ಕಾರ್ಯಾಚರಣೆ ನಡೆಸಿದ್ದಾರೆ ಅಂದ್ರೆ ಅವರು ಸಣ್ಣವರಲ್ಲ, ದೊಡ್ಡ ದೊಡ್ಡ ಕೈಗಳೇ ಇದರ ಹಿಂದೆ ಇರೋದು ಮೇಲ್ನೋಟಕ್ಕೆ ಗೊತ್ತಾಗುತ್ತೆ ಎಂದು ವಿಜಯೇಂದ್ರ ಶಂಕೆ ವ್ಯಕ್ತಪಡಿಸಿದರು.