ಬೆಂಗಳೂರು: ನಗರದಲ್ಲಿ ಸೈಲೆಂಟಾಗಿದ್ದ ಸರಗಳ್ಳರು ಮತ್ತೆ ತಮ್ಮ ಕೃತ್ಯಕ್ಕೆ ಮುಂದಾಗಿದ್ದಾರೆ. ಒಂಟಿ ಮಹಿಳೆಯರನ್ನ ಟಾರ್ಗೆಟ್ ಮಾಡಿ ಕಳೆದ 10 ದಿನಗಳಿಂದ ನಿರಂತರವಾಗಿ ಸರಗಳ್ಳತನ ಮಾಡುತ್ತಿದ್ದ ಆರೋಪಿಗಳ ಕಾಲಿಗೆ ಉತ್ತರ ವಿಭಾಗ ರಾಜಾಜಿನಗರ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ಸುಭಾಷ್ ಮತ್ತು ಸಂಜೀವ್ ಗುಂಡೇಟು ತಿಂದ ಸರಗಳ್ಳರು. ಸ್ವಲ್ಪ ದಿನ ಸೈಲೆಂಟಾಗಿದ್ದ ಸರಗಳ್ಳರು ಮತ್ತೆ ಸಕ್ರಿಯರಾಗಿದ್ದು, ಮಹಿಳೆಯರ ಮಾಂಗಲ್ಯ ಸರ ಕಳ್ಳತನ ಮಾಡುತ್ತಿದ್ದರು. ಈ ಬಗ್ಗೆ ಪೊಲೀಸ್ ಕಂಟ್ರೋಲ್ ರೂಂಗೆ ಕೂಡ ಮಾಹಿತಿ ಬಂದಿತ್ತು. ಹೀಗಾಗಿ ಆರೋಪಿಗಳು ಮಿಸ್ ಆಗಬಾರದೆಂಬ ಮೆಸೇಜ್ ವಾಕಿಟಾಕಿ ಮೂಲಕ ಪೊಲೀಸರಿಗೆ ಪಾಸ್ ಆಗಿತ್ತು.
ಇಂದು ಬೆಳ್ಳಗೆ 5.45ರ ಸುಮಾರಿಗೆ ರಾಜಾಜಿನಗರದ ಹಳೇ ಪೊಲೀಸ್ ಠಾಣೆ ಸರ್ಕಲ್ ಬಳಿ ಆರೋಪಿಗಳು ಮಹಿಳೆಯೋರ್ವರ ಚೈನ್ ಎಗರಿಸಿದ್ದಾರೆ. ತಕ್ಷಣ ಸ್ಥಳೀಯರು 100ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಹಿರಿಯಾಧಿಕಾರಿಗಳು ಅಲರ್ಟ್ ಆಗಿ ರಾತ್ರಿ ಹಾಗೂ ಬೆಳಗ್ಗೆ ಗಸ್ತಿನಲ್ಲಿದ್ದ ರಾಜಾಜಿನಗರ ಇನ್ಸ್ಪೆಕ್ಟರ್ ವೆಂಕಟೇಶ್ ಹಾಗೂ ಶ್ರೀರಾಂಪುರ ಪಿಎಸ್ಐ ವಿನೋದ್, ಆರೋಪಿಗಳನ್ನ ಹಿಡಿಯುವಂತೆ ಸೂಚನೆ ನೀಡಿ ಚೇಸ್ ಮಾಡಿದಾಗ ಆರೋಪಿಗಳು ಇಸ್ಕಾನ್ ಟೆಂಪಲ್ ಬಳಿ ತಗಲಾಕಿಕೊಂಡಿದ್ದಾರೆ.
ಇಸ್ಕಾನ್ ದೇವಾಸ್ಥಾನ ಬಳಿ ಆರೋಪಿಗಳನ್ನ ಬಂಧಿಸಲು ಮುಂದಾದಾಗ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಹೆಡ್ ಕಾನ್ಸ್ಸ್ಟೇಬಲ್ಗೆ ಗಾಯವಾಗಿದ್ದು, ತಕ್ಷಣ ಆತ್ಮರಕ್ಷಣೆಗೆ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ. ಬಳಿಕ ಗಾಯಾಳುಗಳು ಹಾಗೂ ಪೊಲೀಸ್ ಸಿಬ್ಬಂದಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ರಾಜಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಆರೋಪಿಗಳ ಮೇಲೆ ನಗರದ ಹಲವು ಠಾಣೆಗಳಲ್ಲಿ ಸರಗಳ್ಳತನ ಪ್ರಕರಣ ದಾಖಲಾಗಿದ್ದು, ಕೊರೊನಾ ಬಂದ ನಂತ್ರ ಸೈಲೆಂಟಾಗಿದ್ದ ಗ್ಯಾಂಗ್ ಮತ್ತೆ ಅದೇ ದಾರಿ ಹಿಡಿದಿತ್ತು ಎನ್ನಲಾಗಿದೆ.