ಬೆಂಗಳೂರು: 10 ಹೆಚ್.ಪಿ.ವರೆಗಿನ ಪಂಪ್‌ಸೆಟ್ ಇರುವ ಕಾಫಿ ಬೆಳೆಗಾರರಿಗೂ ಸಬ್ಸಿಡಿ ದರದಲ್ಲಿ ವಿದ್ಯುತ್ ಪೂರೈಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಹೇಳಿದ್ದಾರೆ. ಶೂನ್ಯ ವೇಳೆಯಲ್ಲಿ ಬಿಜೆಪಿ ಸದಸ್ಯರಾದ ಅಪ್ಪಚ್ಚು ರಂಜನ್, ಸಿ.ಟಿ.ರವಿ, ಕೆ.ಜಿ.ಬೋಪಯ್ಯ, ಜೆಡಿಎಸ್ ಸದಸ್ಯರಾದ ಎ.ಟಿ. ರಾಮಸ್ವಾಮಿ, ಎಚ್.ಕೆ.ಕುಮಾರಸ್ವಾಮಿ ಸೇರಿದಂತೆ ಇನ್ನಿತರ ಸದಸ್ಯರು ಈ ಸಂಬಂಧ ವಿಷಯ ಪ್ರಸ್ತಾಪಿಸಿದ್ರು.
ವಿಷಯಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು, ಕಾಫಿ ಬೆಳೆಗಾರರ ಸಮಸ್ಯೆಗೆ ಸಂಬಂಧಪಟ್ಟಂತೆ ಇಂಧನ ಸಚಿವ ವಿ.ಸುನೀಲ್ ಕುಮಾರ್ ಅವರ ಜೊತೆಯಲ್ಲಿಯೂ ಸಮಾಲೋಚನೆ ನಡೆಸಿದ್ದೇನೆ ಎಂದು ತಿಳಿಸಿದರು. ಕಾಫಿ ವಾಣಿಜ್ಯ ಬೆಳೆ ಮತ್ತು ಕಾಫಿ ಬೆಳೆಗಾರರು ಶ್ರೀಮಂತರು ಎಂಬ ಮನೋಭಾವದ ಕಾರಣಕ್ಕೆ ಅವರನ್ನು ವಿದ್ಯುತ್ ಸಬ್ಸಿಡಿ ವ್ಯಾಪ್ತಿಗೆ ಸೇರಿಸಿರಲಿಲ್ಲ. ವಿದ್ಯುತ್ ಸಬ್ಸಿಡಿ ನೀಡಲು ಸರ್ಕಾರ ವಾರ್ಷಿಕ 12 ಸಾವಿರ ಕೋಟಿ ರೂ.ಗಳಿಂದ 14 ಸಾವಿರ ಕೋಟಿ ರೂ.ಗಳಷ್ಟು ಮೊತ್ತವನ್ನು ಒದಗಿಸಬೇಕಿದೆ. ಕಾಫಿ ಬೆಳೆಗಾರರಿಗೆ 10 ಹೆಚ್‌ಪಿವರೆಗೆ ವಿದ್ಯುತ್ ಸಬ್ಸಿಡಿ ನೀಡಲು ಸಮಸ್ಯೆ ಇಲ್ಲ. ಆದರೆ, ಇದರ ದುರ್ಬಳಕೆ ತಡೆಗೆ ಕಟ್ಟುನಿಟ್ಟಿನ ನಿಯಮ ರೂಪಿಸಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದರು.
ಇದನ್ನ ಓದಿ: ಹಿಜಾಬ್ ಧರಿಸಿ ಪರೀಕ್ಷೆಗೆ ಹಾಜರು: 1 ಗಂಟೆ ನಂತರ ಪ್ರಶ್ನೆ ಪತ್ರಿಕೆ ವಾಪಸ್ ಪಡೆದು ಹೊರಕಳಿಸಿದ ಸಂಸ್ಥೆ
ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಶಾಸಕ ಅಪ್ಪಚ್ಚು ರಂಜನ್, ಎ.ಟಿ.ರಾಮಸ್ವಾಮಿ ಸೇರಿ ಇನ್ನಿತರರು, ಅಡಿಕೆ, ತಂಬಾಕು ಬೆಳೆಗಾರರ ಪಂಪ್ ಸೆಟ್‌ಗಳಿಗೆ ಸಬ್ಸಿಡಿ ನೀಡಲಾಗುತ್ತದೆ. ಆದರೆ, ಕಾಫಿ ಬೆಳೆಗಾರರಿಗೆ ಮಾತ್ರ ಅನ್ಯಾಯ ಮಾಡಲಾಗುತ್ತಿದೆ. ವಾಣಿಜ್ಯ ದರ ವಿಧಿಸುವುದು ಸರಿಯಿಲ್ಲ. ಕೊಡಗಿನ ಕಾಫಿ ಬೆಳೆಗಾರರು ಕಾವೇರಿ ನದಿಗೆ 350 ಟಿಎಂಸಿಯಷ್ಟು ನೀರನ್ನು ಕೊಡುತ್ತಾರೆ. ಹೀಗಾಗಿ ಅವರಿಗೆ 10 ಹೆಚ್‌ಪಿವರೆಗಿನ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಬ್ಸಿಡಿಯನ್ನು ನೀಡಬೇಕು ಎಂದು ಆಗ್ರಹಿಸಿದರು.