ಬೆಂಗಳೂರು: ಶಾಂತಿನಗರದ ಡಬಲ್ ರಸ್ತೆಯ ಮೇಲ್ಸೇತುವೆಯ ಕೆಳಭಾಗದಲ್ಲಿ ಕಟ್ಟಡ ಅವಶೇಷಗಳನ್ನು ಸುರಿಯಲಾಗಿದ್ದು, ಬೆಂಗಳೂರು ಮಹಾನಗರ ಪಾಲಿಕೆ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶಿತರಾಗಿದ್ದಾರೆ.
ನಗರದಲ್ಲಿ ಕಟ್ಟಡ ಅವಶೇಷಗಳನ್ನು ಸುರಿಯಲು ಪ್ರತ್ಯೇಕ ನಿಯಮಗಳಿದ್ದರೂ ಸಹ ಒಂದೂ ಅನುಷ್ಠಾನವಾಗುತ್ತಿಲ್ಲ. ಡೆಬ್ರಿಸ್ಗಳನ್ನು ಲಾರಿಯಲ್ಲಿ ತುಂಬಿಕೊಂಡು ಬಂದು ಖಾಲಿ ಜಾಗದಲ್ಲಿ ಸುರಿಯುತ್ತಿರುವುದು ಅಲ್ಲಲ್ಲಿ ಗೋಚರಿಸುತ್ತಲೇ ಇದೆ. ಶಾಂತಿನಗರದ ಡಬಲ್ ರಸ್ತೆಯ ಮೇಲ್ಸೇತುವೆಯ ಕೆಳಭಾಗದಲ್ಲಿಯೂ ಡೆಬ್ರಿಸ್ಗಳನ್ನು ಸುರಿಯಲಾಗಿದ್ದು, ಸಾರ್ವಜನಿಕರು ಕಟ್ಟಡ ಕಂಟ್ರಾಕ್ಟರ್ಗಳ ವಿರುದ್ದ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ರಸ್ತೆಗಳ ನಿರ್ಮಾಣ ಮಾಡಲು ಕೋಟ್ಯಂತರ ರೂಪಾಯಿ ವೆಚ್ಚ ಮಾಡುವ ಪಾಲಿಕೆ, ಅವುಗಳ ನಿರ್ವಹಣೆಯಲ್ಲಿ ಎಡುವುತ್ತಿದೆ. ಒಂದು ತಿಂಗಳಿಂದ ಡೆಬ್ರಿಸ್ ರಸ್ತೆ ಮಧ್ಯೆ ಬಿದ್ದಿದ್ದರೂ ಸಹ ತೆರವು ಮಾಡುವ ಕೆಲಸಕ್ಕೆ ಮಾತ್ರ ಪಾಲಿಕೆ ಮುಂದಾಗಿಲ್ಲ. ಕಸ ಸುರಿದ ಬೇಜಾವಾಬ್ದಾರಿ ವ್ಯಕ್ತಿಗಳ ಮೇಲೆ ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ ಎಂದು ಸ್ಥಳೀಯರು ಕುಪಿತಗೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಅಮರೇಶ್, ಕಟ್ಟಡ ಅವಶೇಷಗಳ ನಿರ್ವಹಣೆಯಲ್ಲಿ ಪಾಲಿಕೆ ಮೊದಲಿಂದಲೂ ಎಡವಿದೆ. ಕಂಟ್ರಾಕ್ಟರ್ಗಳು ಸಿಕ್ಕಸಿಕ್ಕ ಕಡೆ ಇವುಗಳನ್ನು ಸುರಿದು ಹೋಗುತ್ತಿರುವುದು ನಗರದ ಸೌಂದರ್ಯವನ್ನು ಹಾಳುಗೆಡವುತ್ತಿದೆ. ಈ ಡೆಬ್ರೀಸ್ ಸಾಗಿಸುವ ವಾಹನಗಳಿಗೆ ಜಿಪಿಎಸ್ ಅಳವಡಿಸುವ ನಿಯಮವನ್ನೂ ಪಾಲಿಕೆ ಮಾಡಿತ್ತು. ಆ ವಾಹನಗಳು ಎಲ್ಲೇ ಸಂಚರಿಸಿದ್ರೂ ಪಾಲಿಕೆಗೆ ಮಾಹಿತಿ ಹೋಗಿ ಸ್ಥಳೀಯ ಇಂಜಿನಿಯರ್ ಗಳು ಕ್ರಮ ವಹಿಸುತ್ತಿದ್ದರು. ಆದರೆ ಈಗ ಯಾವುದೇ ವಾಹನಕ್ಕೂ ಜಿಪಿಎಸ್ ಇಲ್ಲ. ವಲಯಕ್ಕೆ ಇಷ್ಟು ಅಂತ ವಾಹನ ನಿಗದಿ ಮಾಡಿ, ಜನ ಅದಕ್ಕೇ ಸಂಪರ್ಕಿಸುವಂತೆ ಪಾಲಿಕೆ ಮಾಹಿತಿ ನೀಡಬೇಕು. ಆದರೆ ಇದಾವುದೂ ನಡೆಯದ ಕಾರಣ ರಸ್ತೆ ಮಧ್ಯೆ ಕಟ್ಟಡದ ಕಲ್ಲು, ಮಣ್ಣು, ಗಾಜಿನ ಚೂರುಗಳನ್ನು ಸುರಿದುಹೋಗುತ್ತಿದ್ದಾರೆ ಎಂದರು.