ಬೆಂಗಳೂರು: ಮೌಡ್ಯಕ್ಕೆ ಬಲಿಯಾದ ದಂಪತಿ ಮನೆಯಲ್ಲಿ ಸಾವಾಗುತ್ತದೆ ಎಂದು ಹೇಳಿದನ್ನು ನಂಬಿ ಬೆದರಿ ಎರಡು ಲಕ್ಷ ಮೌಲ್ಯದ ಚಿನ್ನಾಭರಣ ಕಳೆದುಕೊಂಡ ಘಟನೆ ಜ್ಞಾನಭಾರತಿ ನಗರದಲ್ಲಿ ನಡೆದಿದೆ.
ವರದರಾಜು ಎಂಬುವವರ ತಂದೆ ಇತ್ತೀಚೆಗೆ ಮೃತಪಟ್ಟಿದ್ದರು. ಕುಟುಂಬದ ಸಂಪ್ರದಾಯದ ಪ್ರಕಾರ, 11 ದಿನ ಮನೆಯಲ್ಲಿ ದೀಪ ಹಚ್ಚಬೇಕು. ಹೀಗಾಗಿ ಮನೆಯಲ್ಲಿ ದೀಪ ಹಚ್ಚಿದ್ದನ್ನು ನೋಡಿ ಮನೆಗೆ ಬಂದ ಬುಡುಬುಡುಕೆ ದಾಸ, ಈ ಮನೆಯಲ್ಲಿ ಮತ್ತೆ ಮೂರು ಸಾವಾಗುತ್ತದೆ ಎಂದು ಇರುಳು ಹೊತ್ತಿನಲ್ಲಿ ಹೇಳಿ ಹೋಗಿದ್ದ. ಇದನ್ನು ಕೇಳಿ ದಂಪತಿ ಬೆದರಿದ್ದರು.
ನಂತರ ಮಾರನೇ ದಿನವೂ ಬಂದಿದ್ದ ಬುಡುಬುಡುಕೆಯವನು, ಮನೆಯಲ್ಲಿ ವರದರಾಜು ಪತ್ನಿ ಒಬ್ಬರೇ ಇರುವುದನ್ನು ನೋಡಿ ಮತ್ತೆ ಮೂರು ಸಾವಾಗುತ್ತದೆ ಎಚ್ಚರ ಎಂದು ಬೆದರಿಸಿದ್ದ. ಈ ವಿಚಾರ ಕೇಳಿ ಭಯಗೊಂಡ ವರದರಾಜು ಪತ್ನಿ, ಬುಡುಬುಡಕೆಯವನನ್ನು ಮನೆಯೊಳಗೆ ಕರೆಸಿ ಮಾತನಾಡಿಸಿದ್ದರು. ಈ ವೇಳೆ ಪೂಜೆ ಮಾಡಬೇಕು, ಅದಕ್ಕಾಗಿ ಐದು ಸಾವಿರ ರೂಪಾಯಿ ಆಗುತ್ತದೆ ಎಂದು ಆತ ಹೇಳಿದ್ದನಂತೆ.
ಇದನ್ನೂ ಓದಿ: ಕಳ್ಳತನವೇ ಫುಲ್ ಟೈಮ್ ಜಾಬ್.. 160 ಪ್ರಕರಣಗಳ ಚಾಲಾಕಿಗೆ ಇಡೀ ಕುಟುಂಬವೇ ಸಾಥ್
ಬುಡುಬುಡುಕೆಯವನಿಗೆ ಐದು ಸಾವಿರ ರೂಪಾಯಿ ಕೊಟ್ಟ ಬಳಿಕ ವರದರಾಜು ಪತ್ನಿಗೆ ಕಪ್ಪು ಬೊಟ್ಟನ್ನ ಹಣೆಗೆ ಹಚ್ಚಿದ್ದಾನೆ. ಈ ಸಂದರ್ಭದಲ್ಲಿ ಮೈಮೇಲಿದ್ದ ಒಡವೆಗಳನ್ನು ಬುಡುಬುಡಕೆ ದಾಸ ಕೇಳಿದ್ದಾನೆ. ಬಳಿಕ ಆಕೆ ತನಗೆ ಅರಿವಿಲ್ಲದಂತೆ ಅದನ್ನ ತೆಗೆದುಕೊಟ್ಟಿದ್ದು, ಒಂದು ಚೈನ್ ಹಾಗೂ ಎರಡು ಉಂಗುರವನ್ನ ಕೊಟ್ಟಿದ್ದಾರೆ. 12 ಗಂಟೆಯೊಳಗೆ ಪೂಜೆ ಮಾಡುತ್ತೇನೆ ಎಂದು ಹೇಳಿದ್ದಾನೆ.
ಅಲ್ಲದೇ ನನ್ನ ಹೆಸರು ಕೃಷ್ಣಪ್ಪ ಎಂದು ಹೇಳಿ ಫೋನ್ ನಂಬರ್ ಇಟ್ಟು ಹೋಗಿದ್ದಾನೆ. ಪತಿ ವರದರಾಜು ಬಂದ ಬಳಿಕ ಅಸಲಿ ಸಂಗತಿ ತಿಳಿದು ಕೃಷ್ಣಪ್ಪನ ನಂಬರ್ಗೆ ಕರೆ ಮಾಡಿದ್ರೆ, ಅದು ಸ್ವಿಚ್ ಆಫ್ ಆಗಿದೆ. ಮೋಸ ಹೋಗಿರುವ ವಿಚಾರ ತಿಳಿಯುತ್ತಿದ್ದಂತೆ ಜ್ಞಾನಭಾರತಿ ಪೊಲೀಸರಿಗೆ ದಂಪತಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.