ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೆ ಅನುಮತಿ ಪಡೆಯಲು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಇಂದು ನವದೆಹಲಿಗೆ ತೆರಳಿದ್ದು, ಹೈಕಮಾಂಡ್ ಅನುಮತಿ ದೊರೆತರೆ ನಾಳೆಯೇ ಸಂಪುಟ ವಿಸ್ತರಣೆ ಸಾಧ್ಯತೆ ಇದೆ ಎನ್ನಲಾಗಿದೆ.
ನವದೆಹಲಿಗೆ ತೆರಳಿರುವ ಬಿಎಸ್ವೈ, ಇಂದು ರಾತ್ರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ, ಕೇಂದ್ರ ಗೃಹಸಚಿವ ಅಮಿತ್ ಶಾ ಸೇರಿದಂತೆ ಹಿರಿಯ ನಾಯಕರ ಜೊತೆ ಚರ್ಚಿಸಿ ನೂತನ ಸಚಿವರ ಪಟ್ಟಿ ಅಂತಿಮಗೊಳಿಸುವ ಸಾಧ್ಯತೆ ಇದೆ. ಒಂದು ವೇಳೆ ವರಿಷ್ಠರಿಂದ ಅನುಮತಿ ಸಿಕ್ಕರೆ ನಾಳೆ ಸಂಜೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯೂ ಹೆಚ್ಚಿದೆ.
ಇನ್ನೊಂದೆಡೆ ಉಪಚುನಾವಣೆಯಲ್ಲಿ ಗೆದ್ದು, ಸಚಿವ ಸ್ಥಾನ ಸಿಗುವುದೆಂಬ ವಿಶ್ವಾಸದಲ್ಲಿರುವ ಶಾಸಕರು ಹಾಗೂ ಮೂಲ ಬಿಜೆಪಿಯ ಕೆಲ ಶಾಸಕರಲ್ಲಿ ಆತಂಕವೂ ಹೆಚ್ಚಾಗಿದೆ.
ದೆಹಲಿಯಲ್ಲಿ ಲಾಬಿ: ಈ ಮಧ್ಯೆ ದೆಹಲಿಗೆ ತೆರಳಿರುವ ಮಾಜಿ ಸ್ಪೀಕರ್, ಶಾಸಕ ಕೆ. ಜೆ. ಬೋಪಯ್ಯ. ಮಾಜಿ ಶಾಸಕ ಸಿ. ಪಿ. ಯೋಗೇಶ್ವರ್ ಅವರು ಸಚಿವ ಸ್ಥಾನಕ್ಕೆ ಲಾಬಿ ನಡೆಸಲು ವರಿಷ್ಠರ ಭೇಟಿಗೆ ಕಾದು ಕುಳಿತಿದ್ದಾರೆ. ಯೋಗೇಶ್ವರ್ ಈಗಾಗಲೇ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಅವರನ್ನು ಭೇಟಿ ಮಾಡಿ ಮಂತ್ರಿಗಿರಿಗೆ ಲಾಬಿ ನಡೆಸಿದ್ದಾರೆ ಎನ್ನಲಾಗಿದೆ.
ದೆಹಲಿ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಹಾಗೂ ಕೇಂದ್ರ ಸಚಿವ ಅಮಿತ್ ಶಾ ತೊಡಗಿಕೊಂಡಿರುವುದರಿಂದ ಇಂದು ರಾತ್ರಿ ಭೇಟಿ ಮಾಡಿ ಬಿಎಸ್ ವೈ ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.