ಬೆಂಗಳೂರು: ಪಾದರಾಯನಪುರ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಜಮೀರ್ ಅಹ್ಮದ್ ನೀಡಿರುವ ಹೇಳಿಕೆ ವಿರುದ್ಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗರಂ ಆಗಿದ್ದಾರೆ.
ಕೊರೊನಾ ಶಂಕಿತರನ್ನು ಕ್ವಾರಂಟೈನ್ಗೆ ಕರೆದೊಯ್ಯುವ ಮುನ್ನ ನನ್ನ ಗಮನಕ್ಕೆ ತರಬೇಕಿತ್ತು. ಅಧಿಕಾರಿಗಳು ರಾತ್ರಿ ಅಲ್ಲಿಗೆ ಹೋಗುವ ಬದಲು ಬೆಳಗ್ಗೆ ಹೋಗಬೇಕಿತ್ತು ಎಂದು ಜಮೀರ್ ಅಹ್ಮದ್ ಹೇಳಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಬಿಎಸ್ವೈ, ಅವರು ಯಾರ್ ರೀ.. ಕೇಳೋಕೆ, ಅವರಿಗೂ ಇದಕ್ಕೂ ಏನ್ರೀ ಸಂಬಂಧ..? ಸರ್ಕಾರ ಮಾಡುವ ಕೆಲಸಕ್ಕೆ ಅವರ ಅಪ್ಪಣೆ ಪಡೆದು ಹೋಗಬೇಕಾ ಎಂದು ವಾಗ್ದಾಳಿ ನಡೆಸಿದ್ದಾರೆ.
ಪಾದರಾಯನಪುರ ಗಲಭೆ ವಿಚಾರದಲ್ಲಿ ಈ ರೀತಿ ಹೇಳಿಕೆ ಕೊಡ್ತಿದ್ದಾರಲ್ಲ. ಅವರೇ ಇದಕ್ಕೆಲ್ಲಾ ಪ್ರಚೋದನೆ ಕೊಡ್ತಿದ್ದಾರೆ ಎಂದು ಭಾವಿಸಬೇಕಾ ಎಂದು ಸಿಎಂ ಪ್ರಶ್ನಿಸಿದರು. ಯಾರು ತಪ್ಪು ಮಾಡಿದ್ದಾರೋ ಅದರ ವಿರುದ್ಧ ಕ್ರಮ ಆಗಬೇಕು ಎನ್ನಬೇಕಾದ ವ್ಯಕ್ತಿಯೇ ಈ ರೀತಿ ಹೇಳಿಕೆ ಕೊಡ್ತಿದ್ದಾರೆ ಅಂದರೆ ಇದು ಬೇಜವಾಬ್ದಾರಿತನದ ಪರಮಾವಧಿ ಎಂದು ಸಿಎಂ ಗುಡುಗಿದರು.
ಪಾದರಾಯನಪುರದಲ್ಲಿ ನಿನ್ನೆ ರಾತ್ರಿ ಪೊಲೀಸರು ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳ ಮೇಲೆ ಅಲ್ಲಿನ ಕೆಲವರು ಗೂಂಡಾಗುರಿ ಪ್ರದರ್ಶಿಸಿ ಶೆಡ್ ಮುರಿದಿದ್ದಾರೆ. ಗೃಹ ಸಚಿವರು ಪೊಲೀಸರು ಕಾಳಜಿ ವಹಿಸಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದ್ದಾರೆ. ನಾವು ಅವರ ಆರೋಗ್ಯ ಕಾಪಾಡುವ ಕಾಳಜಿ ತೋರಿದರೂ ಗೂಂಡಾಗಿರಿ ತೋರಲಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂಬ ಖಡಕ್ ಎಚ್ಚರಿಕೆಯನ್ನು ಸಿಎಂ ರವಾನಿಸಿದ್ದಾರೆ.