ಬೆಂಗಳೂರು: ನಾನು ಯಾರನ್ನು ಸಿಎಂ ಮಾಡಬೇಕೆಂದು ಹೇಳುವುದಿಲ್ಲ. ಹೈಕಮಾಂಡ್ ಯಾವ ತೀರ್ಮಾನ ಬೇಕಾದರೂ ಮಾಡಲಿ. ಯಾವ ಸಮುದಾಯಕ್ಕೆ ನೀಡಬೇಕೆಂಬುದರ ಬಗ್ಗೆಯೂ ಮಾತನಾಡಲ್ಲ.ಯಾವುದೇ ಹೆಸರನ್ನು ನಾನು ಶಿಫಾರಸ್ಸು ಮಾಡುವುದಿಲ್ಲ ಎಂದು ಬಿಎಸ್ವೈ ಹೇಳಿದರು.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಬೆಳಿಗ್ಗೆ ಸುಳಿವು ನೀಡಿದ್ದ ಬಿಎಸ್ವೈ, ಇದೀಗ ಮತ್ತೊಮ್ಮೆ ಅದೇ ವಿಚಾರವಾಗಿ ಮಾತನಾಡಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಜುಲೈ 25ರಂದು ಹೈಕಮಾಂಡ್ನಿಂದ ಸಂದೇಶ ಬರಬಹುದು, ಅದಕ್ಕಾಗಿ ಕಾಯುತ್ತಿದ್ದೇನೆ ಎಂದರು. ಜುಲೈ 26ಕ್ಕೆ ಬಿಜೆಪಿ ಸರ್ಕಾರ ಎರಡು ವರ್ಷಗಳ ಅವಧಿ ಪೂರ್ಣಗೊಳಿಸುತ್ತಿದ್ದು, ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹಾಗೂ ನಮ್ಮ ಸಾಧನೆಗಳ ಬಗ್ಗೆ ಕೈಪಿಡಿ ಬಿಡುಗಡೆ ಮಾಡುತ್ತಿದ್ದೇವೆ ಎಂದರು.
ಎರಡು ತಿಂಗಳ ಹಿಂದೆಯೇ ರಾಜೀನಾಮೆ ನೀಡುವುದಾಗಿ ಹೇಳಿದ್ದೆ. ನಾನು ಅಧಿಕಾರದಲ್ಲಿ ಇರಲಿ, ಬಿಡಲಿ ಆದರೆ ಪಕ್ಷ ಸಂಘಟನೆ ಮಾಡಿ ಮುಂದೆಯೂ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಯತ್ನ ಮಾಡುತ್ತೇನೆ ಎಂದರು. ರಾಜ್ಯದಾದ್ಯಂತ ಸಂಚಾರ ಮಾಡಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ ಎನ್ನುತ್ತಾ, ತಾವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸುಳಿವು ಬಿಟ್ಟುಕೊಟ್ಟರು.
ಸಚಿವ ಸಂಪುಟ ಸಭೆ ನಡೆಸುವುದಕ್ಕೂ ಮುಂಚಿತವಾಗಿ ಮಾತನಾಡಿರುವ ಅವರು, ಸಿಎಂ ಸ್ಥಾನಕ್ಕೆ ಇನ್ನು ಯಾವುದೇ ಹೆಸರು ಶಿಫಾರಸ್ಸು ಮಾಡಿಲ್ಲ. ನಾನು ಮಾಡುವುದಿಲ್ಲ. ಹೈಕಮಾಂಡ್ನಿಂದ ಯಾವುದೇ ಸಂದೇಶ ಬಂದಿಲ್ಲ. ಜುಲೈ 25ರಂದು ಸಂದೇಶ ಬರಬಹುದು ಎಂದು ಕಾಯುತ್ತಿದ್ದೇನೆ ಎಂದರು.
ಇದನ್ನೂ ಓದಿ: ರಾಜೀನಾಮೆ ಕುರಿತು ಸಿಎಂ ಸುಳಿವು: ಸಚಿವ ಸ್ಥಾನದ ಚಿಂತೆ, ಬಿಎಸ್ವೈ ನಿವಾಸಕ್ಕೆ ಸಚಿವರ ದೌಡು..!
ಸ್ವಾಮೀಜಿಗಳು ಬಂದು ಭೇಟಿ ನೀಡುತ್ತಿರುವುದು, ಶಾಸಕರು ನಿಮ್ಮ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದರ ಮಧ್ಯೆ ಕೇಂದ್ರ ಹೈಕಮಾಂಡ್ನಿಂದ ಯಾವುದೇ ರೀತಿಯ ಉತ್ತರ ಬಂದಿಲ್ಲ. ಈ ರೀತಿಯ ಗೊಂದಲ ಯಾಕೆ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಬಿಎಸ್ವೈ, ನಮ್ಮಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ. ನಮ್ಮ ನಾಯಕತ್ವದಲ್ಲಿ ಯಾವುದೇ ರೀತಿಯ ಬಿನ್ನಾಭಿಪ್ರಾಯವಿಲ್ಲ. ಪ್ರಧಾನಿ ನರೇಂದ್ರ ಮೋದಿ, ನಡ್ಡಾ, ಅಮಿತ್ ಶಾ ಅವರು ಏನು ಸೂಚನೆ ನೀಡಿದ್ದಾರೆ ಅದಕ್ಕೆ ನಾನು ಬದ್ಧನಾಗಿದ್ದೇನೆ. ಯಾರನ್ನ ಸಿಎಂ ಮಾಡಬೇಕು ಎಂಬುದರ ಬಗ್ಗೆ ನಾನು ಹೇಳಿಲ್ಲ.ಯಾರ ಹೆಸರನ್ನೂ ಕೂಡ ಶಿಫಾರಸ್ಸು ಮಾಡಿಲ್ಲ. ಕೇಂದ್ರದ ಮೇಲೆ ಯಾವುದೇ ರೀತಿಯ ಒತ್ತಡ ಹೇರಿಲ್ಲ ಎಂದು ತಿಳಿಸಿದರು.