ಬೆಂಗಳೂರು: ವಿಶ್ವಾಸ ಮತ ಚರ್ಚೆ ಮಾಡದೆ ಎಷ್ಟು ದಿನ ಹೀಗೇ ಕಲಾಪ ನಡೆಸುತ್ತಾರೆ ನೊಡೋಣ ಎಂದು ಮೈತ್ರಿ ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಗುಡುಗಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಹುಮತ ಸಾಬೀತಿಗೆ ಅವರೇ ಕೇಳಿದ್ದು, ರಾತ್ರಿ 12 ಗಂಟೆ ಆದರೂ ಚರ್ಚೆಗೆ ಅವಕಾಶ ಕೊಡಿ ಎಂದಿದ್ದೆವು. ಆದರೆ ಅವರಿಗೆ ಕಾಲಹರಣ ಮಾಡುವುದೇ ಉದ್ದೇಶವಾಗಿದೆ. ಕುಂಟು ನೆಪ ಮಾಡಿ ಕಲಾಪ ಮುಂದೂಡುವುದೇ ಕಾಂಗ್ರೆಸ್, ಜೆಡಿಎಸ್ ಸದಸ್ಯರ ಯೋಜನೆ ಆಗಿತ್ತು. ಹೀಗಾಗಿ ನಾವು ರಾತ್ರಿಯಿಡೀ ಸತ್ಯಾಗ್ರಹ ಮಾಡುತ್ತಿದ್ದೇವೆ ಎಂದರು.
ಇಡೀ ದೇಶದ ಜನ ಕಲಾಪ ವೀಕ್ಷಿಸಿದ್ದು, ಸರ್ಕಾರಕ್ಕೆ ಬಹುಮತ ಇಲ್ಲ. ಹೀಗಾಗಿ ನಾವು ಅವಿಶ್ವಾಸ ನಿರ್ಣಯಕ್ಕೆ ಒತ್ತಾಯ ಮಾಡಿದ್ದೆವು. ಆದರೆ ಸ್ಪೀಕರ್ ರಮೇಶ್ ಕುಮಾರ್ ಅವರು, ಸಿಎಂ ಅವರು ವಿಶ್ವಾಸ ಮತಕ್ಕೆ ಅವಕಾಶ ಕೊಡಿ ಅಂತಾ ಕೇಳಿದ್ದಾರೆ ಅಂದಿದ್ದರು. ಅದಕ್ಕೆ ನಾವು ಅವಕಾಶ ನೀಡಿದ್ದೆವು. ವಿಶ್ವಾಸ ಮತಯಾಚನೆ ನಿರ್ಣಯ ಮಂಡಿಸಲಾಗದೆ ಸಿಎಂ 15 ನಿಮಿಷ ಮಾತನಾಡಿದರು. ಕಾಂಗ್ರೆಸ್, ಜೆಡಿಎಸ್ 98 ಸದಸ್ಯರಿದ್ದು, ನಾವು 105 ಶಾಸಕರಿದ್ದೆವು. ಬಹುಮತ ಇಲ್ಲದಿದ್ದರೂ ಮತಕ್ಕೆ ಹಾಕಲಿಲ್ಲ.
15 ಶಾಸಕರು ಸುಪ್ರೀಂ ಕೋರ್ಟ್ಗೆ ಹೋಗಿದ್ದು, ಶಾಸಕರು ಸದನಕ್ಕೆ ಬರುವುದು, ಬಿಡುವುದು ಅವರಿಷ್ಟ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಆದರೂ ಕಲಾಪದಲ್ಲಿ ಅನಗತ್ಯವಾಗಿ ಈ ವಿಷಯವನ್ನು ಎಳೆದು ಕಾಲಹರಣ ಮಾಡಲಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುಪ್ರೀಂ ಕೋರ್ಟ್ ಎಲ್ಲವನ್ನೂ ಗಮನಿಸುತ್ತಿದೆ. ರಾಜ್ಯಪಾಲರು ಕೂಡ ನಮ್ಮ ದೂರು ಆಧರಿಸಿ ಸಂದೇಶ ರವಾನಿಸಿದ್ದಾರೆ. ರಾಜ್ಯಪಾಲರ ಸಂದೇಶಕ್ಕೂ ಸ್ಪಷ್ಟೀಕರಣವಿಲ್ಲದೇ ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದಾರೆ. ಅಭಿವೃದ್ಧಿ ಕಾರ್ಯ ನಿಂತುಹೋಗಿದ್ದು, ಬಹುಮತ ಕಳೆದುಕೊಂಡ ಮೇಲೆ ರಾಜೀನಾಮೆ ಕೊಡಬೇಕಿತ್ತು. ದೇಶ ಎಲ್ಲವನ್ನೂ ಗಮನಿಸುತ್ತಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.