ಬೆಂಗಳೂರು: ರೇಸ್ ಕೋರ್ಸ್ ರಸ್ತೆಯಲ್ಲಿರುವ ಅದೃಷ್ಟದ ನಿವಾಸದ ಬದಲು ಮಾಜಿ ಸಿಎಂ ಸಿದ್ದರಾಮಯ್ಯ ಇದ್ದ ಕಾವೇರಿ ನಿವಾಸದಲ್ಲಿ ವಾಸ್ತವ್ಯ ಹೂಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ಧರಿಸಿದ್ದು, ಸಿಎಂ ಅಪೇಕ್ಷೆಯಂತೆ ರೇಸ್ವ್ಯೂ ನಿವಾಸದ ಬದಲು ಕಾವೇರಿ ನಿವಾಸವನ್ನು ಸಿಎಂಗೆ ಬದಲಾವಣೆ ಮಾಡಿ ಹಂಚಿಕೆ ಮಾಡಲಾಗಿದೆ.
ಸಿಎಂ ಬಿ.ಎಸ್.ಯಡಿಯೂರಪ್ಪ ಇನ್ನುಮುಂದೆ ಕಾವೇರಿ ನಿವಾಸದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಅದೃಷ್ಟ ನಿವಾಸವಾದ ರೇಸ್ ಕೋರ್ಸ್ ರಸ್ತೆಯಲ್ಲಿರುವ ರೇಸ್ವ್ಯೂ ಕಾಟೇಜ್-2 ಸಿಗಲಿಲ್ಲ ಎಂದು ಪ್ರತಿಪಕ್ಷ ನಾಯಕರಾಗಿದ್ದಾಗ ಸರ್ಕಾರಿ ಬಂಗಲೆಯನ್ನೇ ತಿರಸ್ಕರಿಸಿದ್ದ ಬಿಎಸ್ವೈ ನಂತರ ಸಿಎಂ ಆದ ಬಳಿಕ ಅದೇ ಅದೃಷ್ಟ ನಿವಾಸವನ್ನು ತಮಗೆ ಮಂಜೂರು ಮಾಡಿಸಿಕೊಂಡು ನಿವಾಸದ ಅಲಂಕಾರ ಕಾರ್ಯ ನಡೆಸುತ್ತಿದ್ದರು. ಇನ್ನೇನು ನವರಾತ್ರಿಗೆ ರೇಸ್ ವ್ಯೂ ನಿವಾಸಕ್ಕೆ ತೆರಳಲು ಎಲ್ಲಾ ರೀತಿಯ ಸಿದ್ದತೆ ನಡೆಸಿದ್ದರು. ಆದರೆ ಇಂದು ದಿಢೀರ್ ನಿರ್ಧಾರ ಬದಲಿಸಿದ್ದಾರೆ.
ರೇಸ್ ಕೋರ್ಸ್ ರಸ್ತೆಯ ಬದಲು ಗೃಹ ಕಚೇರಿ ಕೃಷ್ಣಾ ಪಕ್ಕದಲ್ಲೇ ಇರುವ ಕಾವೇರಿ ನಿವಾಸದಲ್ಲಿ ವಾಸ್ತವ್ಯ ಹೂಡಲು ನಿರ್ಧರಿಸಿದ್ದಾರೆ. ಈ ಸಂಬಂಧ ಸರ್ಕಾರದ ಶಿಷ್ಟಾಚಾರ ಇಲಾಖೆ ಅಧೀನ ಕಾರ್ಯದರ್ಶಿ ಶಿವಕುಮಾರ್ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಮಂಜೂರಾಗಿದ್ದ ರೇಸ್ವ್ಯೂ ಕಾಟೇಜ್ ಬದಲಿಗೆ ಕಾವೇರಿ ನಿವಾಸವನ್ನು ಬದಲಾಯಿಸಿ ಮರುಹಂಚಿಕೆ ಮಾಡಿ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಸದ್ಯ ಇಷ್ಟು ದಿನ ಆ ನಿವಾಸದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಾಸ್ತವ್ಯ ಹೂಡಿದ್ದರು. ಮುಖ್ಯಮಂತ್ರಿ ಆಗಿದ್ದಾಗ ಅದೇ ನಿವಾಸದಲ್ಲಿ ಐದು ವರ್ಷ ಪೂರ್ಣಗೊಳಿಸಿದ್ದ ಸಿದ್ದರಾಮಯ್ಯ ನಂತರ ಮೈತ್ರಿ ಸರ್ಕಾರದಲ್ಲಿ ಕೆ.ಜೆ.ಜಾರ್ಜ್ ಅವರಿಗೆ ಕಾವೇರಿ ನಿವಾಸ ಮಂಜೂರಾಗಿದ್ದರೂ ಜಾರ್ಜ್ ಹೆಸರಿನಲ್ಲೇ ವಾಸ್ತವ್ಯ ಹೂಡಿದ್ದರು. ಇದೀಗ ಸಿದ್ದರಾಮಯ್ಯ ನಿವಾಸ ಖಾಲಿ ಮಾಡಿದ್ದು, ಅದನ್ನ ಬಿಎಸ್ವೈಗೆ ಮರು ಹಂಚಿಕೆ ಮಾಡಲಾಗಿದೆ.
ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅವಧಿ ಪೂರ್ಣಗೊಳಿಸಿದ್ದರು. ದಲಿತ ಸಿಎಂ ಸೇರಿ ಸಾಕಷ್ಟು ಸವಾಲು ಬಂದರೂ ಎದುರಿಸಿ ಅರಸು ನಂತರದ ಪೂರ್ಣಾವಧಿ ಸಿಎಂ ಎನಿಸಿಕೊಂಡರು ಆದರೆ, ರೇಸ್ ಕೋರ್ಸ್ ನಿವಾಸದಲ್ಲಿ ಯಡಿಯೂರಪ್ಪ ಪೂರ್ಣಾವಧಿ ಮುಗಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಈಗ ಸಿಎಂ ಬಿಎಸ್ವೈ ಕಾವೇರಿಗೆ ನಿವಾಸ ಬದಲಿಸಲು ಹೊರಟಿದ್ದಾರೆ ಎನ್ನಲಾಗಿದೆ.
ಆದರೆ, ಸಿಎಂ ಕಚೇರಿ ಮೂಲಗಳು ಹೇಳುತ್ತಿರುವುದೇ ಬೇರೆ. ರೇಸ್ ವ್ಯೂ ಕಾಟೇಜ್ನಲ್ಲಿ ವಾಸ್ತವ್ಯ ಹೂಡಿದರೆ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಅಲ್ಲದೇ ಗೃಹ ಕಚೇರಿ ಕೃಷ್ಣಾ ಪಕ್ಕದಲ್ಲೇ ವಾಸ್ತವ್ಯ ಇದ್ದರೆ ಜನರು ಅಧಿಕೃತ ನಿವಾಸಕ್ಕೆ ಬರುವ ಬದಲು ಗೃಹ ಕಚೇರಿಗೆ ಬರಬಹುದು. ಇದರಿಂದ ಜನರ ಸಮಯವು ಉಳಿತಾಯವಾಗಲಿದೆ ಎನ್ನುವ ವಿವರಣೆ ಬಂದಿದೆ.
ಒಟ್ಟಿನಲ್ಲಿ ಸಿಎಂ ಬಿಎಸ್ವೈ ಅದೇಕೊ ತಮ್ಮ ಅದೃಷ್ಟದ ನಿವಾಸವನ್ನು ಬದಲಿಸಿದ್ದು ಕಾವೇರಿಯಲ್ಲಿ ಹೊಸ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.