ಬೆಂಗಳೂರು: ಕಾರ್ಗಿಲ್ ವಿಜಯ್ ದಿವಸ್ ಹಿನ್ನೆಲೆಯಲ್ಲಿ ಹುತಾತ್ಮ ಭಾರತೀಯ ಯೋಧರಿಗೆ ಗೌರವ ನಮನ ಸಲ್ಲಿಸಿ ಅವರ ಕುಟುಂಬ ವರ್ಗಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.
ಇಡೀ ದೇಶ ಇಂದು ಕಾರ್ಗಿಲ್ ವಿಜಯ ದಿವಸವನ್ನು ಆಚರಿಸುತ್ತಿದೆ. ದೇಶಕ್ಕಾಗಿ ಹುತಾತ್ಮರಾದ ಎಲ್ಲಾ ಭಾರತೀಯ ಸೈನಿಕರಿಗೂ ಇಂದು ವಿಶೇಷವಾಗಿ ನಮ್ಮ ಗೌರವ ನಮನಗಳನ್ನು ಸಲ್ಲಿಸೋಣ. ಭಾರತೀಯ ಸೇನಾಪಡೆಗಳ ವೀರಯೋಧರಿಗೆ ಮತ್ತು ಅವರ ಕುಟುಂಬದವರಿಗೆ ಬೆಂಬಲ ಹಾಗೂ ಹೆಮ್ಮೆಯ ಅಭಿನಂದನೆಗಳನ್ನು ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
ಸಿಎಂ ಜೊತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಸಂಪುಟ ಸಹೋದ್ಯೋಗಿಗಳು ಕೂಡ ಕಾರ್ಗಿಲ್ ವಿಜಯ್ ದಿವಸ್ ಸ್ಮರಿಸಿ ಟ್ವೀಟ್ ಮಾಡಿದ್ದಾರೆ.
ಇದು ಕಾರ್ಗಿಲ್ ವಿಜಯ ದಿನದ 21 ನೇ ವರ್ಷಾಚರಣೆ. ಆಪರೇಷನ್ ವಿಜಯ್ ಯಶಸ್ಸು ಮತ್ತು 1999 ರ ಕಾರ್ಗಿಲ್ ಯುದ್ಧದಲ್ಲಿ ನಮ್ಮ ಕೆಚ್ಚೆದೆಯ ಸೈನಿಕರ ತ್ಯಾಗವನ್ನು ಸ್ಮರಿಸುವ ದಿನ. ಪಾಕಿಸ್ತಾನದ ದರ್ಪವನ್ನು ಮುರಿದು ಭಾರತಕ್ಕೆ ಅಮೋಘ ಜಯ ತಂದುಕೊಟ್ಟ ವೀರ ಹುತಾತ್ಮ ಯೋಧರಿಗೆ ಶತಕೋಟಿ ನಮನಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ.