ಬೆಂಗಳೂರು: ಕಲಬುರಗಿ ರೈತನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಬಿಎಸ್ವೈ, ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದಾರೆ.
ಕಲ್ಲಂಗಡಿ ಬೆಳೆ ನಷ್ಟಕ್ಕೊಳಗಾಗಿ ಮನನೊಂದ ರೈತ ಆತ್ಮಹತ್ಯೆಗೆ ಶರಣಾಗಿದ್ದ. ಆತನ ಕುಟುಂಬದ ನೆರವಿಗೆ ಧಾವಿಸಿರುವ ಸಿಎಂ ಆರ್ಥಿಕ ನೆರವು ಘೋಷಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ್, ತೋಟಗಾರಿಕೆ ಸಚಿವ ನಾರಾಯಣ ಗೌಡ, ಸಹಕಾರಿ ಸಚಿವ ಎಸ್.ಟಿ ಸೋಮಶೇಖರ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಬಿಎಸ್ವೈ ತುರ್ತು ಸಭೆ ನಡೆಸಿದರು.
ರೈತರ ಹಿತ ಕಾಯಲು ತಿಳಿಸಿರುವ ಪ್ರತಿಪಕ್ಷ ನಾಯಕರ ಸಲಹೆಗಳು, ರೈತರ ಬೆಳೆ ನಷ್ಟಕ್ಕೆ ಪರಿಹಾರ, ಬೆಳೆ ಬೆಲೆ ನಿಗದಿ, ರಸಗೊಬ್ಬರ, ಬೀಜ ವಿತರಣೆ ಕುರಿತು ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿಸಿದರು.
ಕರ್ನಾಟಕದಿಂದ ರಫ್ತಾಗುತ್ತಿರುವ ಹಣ್ಣು, ತರಕಾರಿಗಳ ವಾಹನಗಳಿಗೆ ಪೊಲೀಸರು ತಡೆ ಹಾಕಬಾರದು. ಸರಕು-ಸಾಗಣೆ ವಾಹನಗಳನ್ನು ತಡೆಯದಂತೆ ಸೂಚಿಸಿದ್ದೇವೆ. ತಡೆದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಅಗತ್ಯ ವಸ್ತುಗಳ ಖರೀದಿಗೆ ಜನರಿಗೆ ಅವಕಾಶ ಇದೆ. ಅಗತ್ಯ ವಸ್ತುಗಳು, ತರಕಾರಿ, ಹಣ್ಣಿನ ಮಾರಾಟಕ್ಕೆ ಯಾವುದೇ ತೊಂದರೆ ಇಲ್ಲ. ಈ ಸಭೆಯಲ್ಲಿ ರೈತರು ಮತ್ತು ಗ್ರಾಹಕರ ಹಿತ ಕಾಪಾಡಲು ಕೆಲ ತೀರ್ಮಾನ ಕೈಗೊಳ್ಳಲಾಗಿದೆ. ಸರಕು ಸಾಗಾಣೆ ರೈಲುಗಳ ಮೂಲಕ ಹೊರ ರಾಜ್ಯಗಳಿಗೆ ಹಣ್ಣು, ತರಕಾರಿ ಸಾಗಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಬಡವರಿಗೆ ಉಚಿತ ಹಾಲು:
ನಾಳೆಯಿಂದ ಬಡವರಿಗೆ ಉಚಿತವಾಗಿ ಹಾಲು ವಿತರಣೆ ಮಾಡಲಾಗುತ್ತದೆ. ಜಿಲ್ಲಾಧಿಕಾರಿಗಳಿಗೆ ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾಹಿತಿ ರವಾನೆ ಮಾಡಲಾಗಿದ್ದು, ಎಲ್ಲ ಜಿಲ್ಲೆಗಳಲ್ಲೂ ಬಡವರಿಗೆ ಏಪ್ರಿಲ್14 ರವರೆಗೆ ಉಚಿತ ಹಾಲು ವಿತರಣೆ ಮಾಡಲಾಗುತ್ತದೆ. 7.5 ಲಕ್ಷ ಲೀಟರ್ ಹಾಲು ವಿತರಿಸಲು ಕೆಎಂಎಫ್ ಗೆ 32 ಕೋಟಿ ರೂ ಹಣವನ್ನು ರಾಜ್ಯ ಸರ್ಕಾರ ನೀಡಲಿದೆ..
ವಿಧವಾ ವೇತನ, ವೃದ್ಧಾಪ್ಯ ವೇತನಗಳಿಗೆ ಸಮಸ್ಯೆ ಆಗದಂತೆ ಪೆನ್ಷನ್ಗಳನ್ನು ತಕ್ಷಣ ಕೊಡಲು ಸೂಚನೆ ನೀಡಲಾಗಿದೆ ಎಂದರು.
ದೆಹಲಿ ಧಾರ್ಮಿಕ ಸಭೆಗೆ ಹೋಗಿ ಬಂದಿದ್ದರೆ ಸ್ವಯಂ ಆಗಿ ಬಂದು ಮಾಹಿತಿ ಕೊಡಿ. ಬೇರೆಯವರಿಗೆ ಆತಂಕ ಉಂಟು ಮಾಡಬೇಡಿ, ನೀವಾಗಿ ನೀವೇ ಬಂದು ಪೊಲೀಸರಿಗೆ ಮಾಹಿತಿ ಕೊಡಿ ಎಂದು ಬಿಎಸ್ವೈ ಮನವಿ ಮಾಡಿಕೊಂಡಿದ್ದಾರೆ.
ಏಪ್ರಿಲ್ 14ರವರೆಗೆ ಮದ್ಯದಂಗಡಿ ಬಂದ್:
ಮದ್ಯದಂಗಡಿ ಆರಂಭ ಕುರಿತ ವದಂತಿಗೆ ಸ್ಪಷ್ಟೀಕರಣ ನೀಡಿದ ಸಿಎಂ, ಏಪ್ರಿಲ್ 14 ವರೆಗೆ ಮದ್ಯದಂಗಡಿ ಬಂದ್ ಇರಲಿದೆ. ಯಾರೆಲ್ಲ ಎಣ್ಣೆ ಕುಡಿಯಬೇಕು ಅಂತಿದ್ದಾರೋ ಅವರೆಲ್ಲರೂ ಅಲ್ಲಿಯವರೆಗೆ ಕಾಯಿರಿ ಎಂದು ಸುದ್ದಿಗೋಷ್ಟಿಯಲ್ಲಿ ನಗೆ ಚಟಾಕಿ ಹಾರಿಸಿದರು.