ಬೆಂಗಳೂರು: 17 ಅನರ್ಹ ಶಾಸಕರ ಕುರಿತ ಸುಪ್ರೀಂಕೋರ್ಟ್ ನೀಡಿದ ತೀರ್ಪಿನಿಂದ ಬಿಜೆಪಿ ನಿರಾಳವಾಗಿದ್ದು, ಸಿಎಂ ಯಡಿಯೂರಪ್ಪ ನಿಟ್ಟುಸಿರು ಬಿಡುವಂತಾಗಿದೆ.
ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಸಚಿವವಾರದ ಸುರೇಶ್ ಕುಮಾರ್, ಬೊಮ್ಮಾಯಿ, ನಾಗೇಶ್ ಜೊತೆ ಚರ್ಚೆ ನಡೆಸುತ್ತಿದ್ದು, ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಕೂಡಾ ಸಿಎಂ ನಿವಾಸಕ್ಕೆ ಆಗಮಿಸಿದ್ದಾರೆ. ಸುಪ್ರೀಂ ತೀರ್ಪು ಹಾಗೂ ಮುಂದಿನ ಕಾನೂನಾತ್ಮಕ ನಡೆ ಬಗ್ಗೆ ಸಿಎಂ ಸಲಹೆ ಪಡೆಯುತ್ತಿದ್ದಾರೆ.
ಇಂದು ಸಂಜೆ ಬಿಜೆಪಿಯ ಮಹತ್ವದ ಕೋರ್ ಕಮಿಟಿ ಸಭೆ ನಡೆಯಲಿದ್ದು, ಬಿಜೆಪಿ ಟಿಕೆಟ್ ಹಂಚಿಕೆ ಗೊಂದಲಕ್ಕೆ ತೆರೆ ಬೀಳುತ್ತಾ ಎಂದು ಕಾದುನೋಡಬೇಕಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಮಧ್ಯಾಹ್ನ ಮೂರು ಗಂಟೆಗೆ ಕೋರ್ ಕಮಿಟಿ ಸಭೆ ನಡೆಯಲಿದೆ.
ಕೋರ್ ಕಮಿಟಿ ಸಭೆಯಲ್ಲಿ ಅನರ್ಹರಿಗೆ ಟಿಕೆಟ್ ಕೊಡುವ ಬಗ್ಗೆ ನಿರ್ಧಾರವಾಗಲಿದ್ದು, ಅನರ್ಹರ ಪಕ್ಷ ಸೇರ್ಪಡೆ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ. ಅನರ್ಹ ಶಾಸಕರನ್ನು ಬಿಜೆಪಿ ಪಕ್ಷಕ್ಕೆ ನಾಳೆ ಅಥವಾ ನಾಡಿದ್ದು ಸೇರ್ಪಡೆ ಮಾಡಿಕೊಳ್ಳುವುದು, ಬಳಿಕ ಚುನಾವಣೆಯಲ್ಲಿ ಅವರನ್ನ ಗೆಲ್ಲಿಸುವುದಕ್ಕೆ ರಣತಂತ್ರ ರೂಪಿಸುವುದರ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.